ಬ್ರಹ್ಮಚಾರಿ ಟೀಸರ್ ರಿಲೀಸ್ ಆಗಿದೆ. ಟೀಸರ್ ತುಂಬಾ ಕಚಗುಳಿಯಿಡುವ ಡೈಲಾಗ್ಸ್ ಇವೆ. ಬ್ರಹ್ಮಚಾರಿ ಟೀಸರ್ ಸ್ಪೆಷಾಲಿಟಿ ಏನೆಂದರೆ, ಅಲ್ಲಿ ನೀನಾಸಂ ಸತೀಶ್ ಪಾತ್ರ ನರಳುತ್ತಿದ್ದರೆ, ನೋಡುವವರು ನಗುತ್ತಿರುತ್ತಾರೆ. ಬ್ರಹ್ಮಚಾರಿ ಟೀಸರ್ ತುಸು ಪೋಲಿತನದಿಂದಲೇ ಶುರುವಾದರೂ, ಅಲ್ಲೇನೋ ಸೀರಿಯಸ್ ಪ್ರಾಬ್ಲಂ ಇದೆ.
ಡಬಲ್ ಮೀನಿಂಗ್ ಇಲ್ಲವೇ ಇಲ್ಲ. ಎಲ್ಲವೂ ನೇರಾನೇರ. ಹಾಗಂತ ಕೆಟ್ಟಾ ಕೊಳಕ ಭಾಷೆಯೇನೂ ಇಲ್ಲ. ನೀನಾಸಂ ಸತೀಶ್ ಜೊತೆ ಮಾತನಾಡುವ ಪ್ರತಿಯೊಂದು ಪಾತ್ರವೂ ಸೀರಿಯಸ್ಸಾಗಿಯೇ ಮಾತನಾಡುತ್ತೆ. ಆದಿತಿಯೂ ಸೇರಿದಂತೆ.. ಕೇಳುವವರು ಕೆಟ್ಟದಾಗಿ ಕೇಳಿಸಿಕೊಂಡ್ರೆ ನಿರ್ದೇಶಕರು ಪಾಪ ಏನ್ ಮಾಡೋಕಾಗುತ್ತೆ.
ಮದುವೆಯಾಗೋ ಬ್ರಹ್ಮಚಾರಿಗೆ ಅದೊಂದೇ ವೀಕ್ನೆಸ್. ಅದರ ಸುತ್ತಲೇ ಇದೆ ಟೀಸರ್. ಸತೀಶ್, ಆದಿತಿ ಪ್ರಭುದೇವ ಹಿಡ್ಕ ಹಿಡ್ಕ ಸಾಂಗಿನ ಝಲಕ್ಕೂ ಇರೋ ಟೀಸರಿನಲ್ಲಿ ದತ್ತಣ್ಣ ಡಾಕ್ಟರ್ ಆಗಿ, ಶಿವರಾಜು, ಅಶೋಕ್ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಆದಿತಿಯ ತಾಯಿಯಾಗಿ ಪದ್ಮಜಾ ರಾವ್, ಸರ್ಕಾರಿ ನೌಕರನಾಗಿ ಅಚ್ಯುತ್ ಕುಮಾರ್ ಇದ್ದಾರೆ.
ಉದಯ್ ಕೆ.ಮೆಹ್ತಾ ನಿರ್ಮಾಣದ ಚಿತ್ರಕ್ಕೆ ಚಂದ್ರ ಮೋಹನ್ ಡೈರೆಕ್ಟರ್.