ಪೊಗರು ಚಿತ್ರದ ಡೈಲಾಗ್ ಟ್ರೇಲರ್ ಹೊರಬಿದ್ದಿದ್ದೇ ತಡ.. ಎಲ್ಲರೂ ಕೆಣಕೋಕೆ ಶುರು ಮಾಡಿದ್ದು ರಶ್ಮಿಕಾ ಮಂದಣ್ಣ ಅವರನ್ನ. ರಶ್ಮಿಕಾ, ಈ ಚಿತ್ರದ ನಾಯಕಿ. ಪೊಗರು ಬಿಟ್ಟರೆ, ಬೇರೆ ಯಾವುದೇ ಕನ್ನಡ ಸಿನಿಮಾವನ್ನು ರಶ್ಮಿಕಾ ಒಪ್ಪಿಕೊಂಡಿಲ್ಲ. ಜೊತೆಗೆ ವಿನಾಕಾರಣವಾಗಿ ರಶ್ಮಿಕಾ ಮಂದಣ್ಣ, ಕನ್ನಡವನ್ನೇ ಮರೆತುಬಿಟ್ಟಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲೊಂದು ನಂಬಿಕೆ ಬಲವಾಗಿ ಬೇರೂರಿದೆ. ಅದಕ್ಕೆ ತಕ್ಕಂತೆ ಪೊಗರು ಚಿತ್ರದ ಈ ಡೈಲಾಗ್.
ಪೊಗರುನಲ್ಲಿ ಟೀಚರ್ ಪಾತ್ರ ಮಾಡಿದ್ದಾರೆ ರಶ್ಮಿಕಾ ಮಂದಣ್ಣ. ಟ್ರೇಲರಿನಲ್ಲಿ ಇಂಗ್ಲಿಷಿನಲ್ಲಿ ಮಾತನಾಡುವ ರಶ್ಮಿಕಾಗೆ ಧ್ರುವ ಸರ್ಜಾ ಮಾತೃ ಭಾಷೆ ಬಿಟ್ಟೋರೂ ಮೂರೂ ಬಿಟ್ಟೋರು ಎಂದು ಡೈಲಾಗ್ ಹೊಡೀತಾರೆ. ಇದು ರಶ್ಮಿಕಾ ಅವರನ್ನೇ ಉದ್ದೇಶಿಸಿ ಹೇಳಿದಂತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ರಶ್ಮಿಕಾ ಮಂದಣ್ಣ ಅವರನ್ನು ಕೆಣಕಿದ್ದಾರೆ.
ಹಾಗೆ ಕೆಣಕಿದವರಿಗೆ ರಶ್ಮಿಕಾ ಮಂದಣ್ಣ ಕೊಟ್ಟಿರುವ ಉತ್ತರ ಇದು. `ಈ ಚಿತ್ರದಲ್ಲಿ ಈ ಡೈಲಾಗ್ ಯಾಕೆ ಇದೆ ಎಂಬ ಬಗ್ಗೆ ನಾವೆಲ್ಲ ಚರ್ಚೆ ಮಾಡುತ್ತಿದ್ದೇವೆ. ನೀವೆಲ್ಲರೂ ಇದು ನನಗೇ ಉದ್ದೇಶಿಸಿ ಹೇಳಿದ್ದಾರೆ ಎನ್ನುತ್ತಿದ್ದೀರಿ. ಸರಿಯೋ.. ತಪ್ಪೋ.. ಟ್ರೇಲರ್ ಗೆದ್ದಿದೆ. ನನಗಾಗಿ ಯೋಚಿಸಲು ನೀವು ನಿಮ್ಮ ಅಮೂಲ್ಯವಾದ ಸಮಯ ಮೀಸಲಿಟ್ಟಿದ್ದೀರಿ. ಯೆಸ್. ನಾನು ಗೆದ್ದಿದ್ದೇನೆ' ಎಂದಿದ್ದಾರೆ ರಶ್ಮಿಕಾ ಮಂದಣ್ಣ.