ಮಹಾತ್ಮಾ ಗಾಂಧೀಜಿ 150ನೇ ಜಯಂತಿ ವಿಶೇಷವಾಗಿ ಕೇಂದ್ರ ಸರ್ಕಾರ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಬಾಲಿವುಡ್ ಗಣ್ಯರನ್ನು ಆಹ್ವಾನಿಸಲಾಗಿತ್ತು. ಇಡೀ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಯಾವುದೇ ಭಾಷೆಯ ಒಬ್ಬ ಕಲಾವಿದರೂ ಇರಲಿಲ್ಲ. ಮೋದಿಯವರ ಕಣ್ಣಿಗೆ ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು, ಮಲಯಾಳಂ ಕಲಾವಿದರು ಕಾಣಲಿಲ್ಲವೇ ಎಂದು ಹಲವು ದಕ್ಷಿಣದ ತಾರೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ವತಃ ಬಿಜೆಪಿ ಮುಖಂಡರೂ ಅಗಿರುವ ಜಗ್ಗೇಶ್ ಕಲಾರಂಗಕ್ಕೆ ಶಾರೂಕ್, ಅಮೀರ್ ಅವರೇ ಒಡೆಯರಲ್ಲ. ಕನ್ನಡದಲ್ಲೂ ಕಲಿಗಳು ಅನೇಕರಿದ್ದಾರೆ. ಪರಭಾಷೆಗಳಿಗೆ ಚಪ್ಪಾಳೆ ಹೊಡೆತ ತಪ್ಪಿಗೆ ನಾವು ಕನ್ನಡಿಗರು ದಾರಿ ತಪ್ಪಿದಂತೆ ಆಗಿದ್ದೇವೆ. ಉತ್ತರ ಭಾರತದ ನಟನಟಿಯರಿಗಿಂತ ನಾವು ಯಾವುದ್ರಲ್ಲೂ ಕಡಿಮೆ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಮುಖಂಡರಾಗಿ ಮೋದಿ ವಿರುದ್ಧ ಮಾತನಾಡಿದ್ರಾ ಎಂಬ ಪ್ರಶ್ನೆಗೂ ಉತ್ತರ ಕೊಟ್ಟಿರುವ ಜಗ್ಗೇಶ್ ನಾನು ಮೋದಿ ವಿರುದ್ಧ ತಿರುಗಿಬೀಳುಷ್ಟು ದೊಡ್ಡವನಲ್ಲ. ಸೌತ್ ಇಂಡಿಯಾದವರನ್ನು ಬಿಟ್ಟಿದ್ದಕ್ಕೆ ವಿರೋಧಿಸಿದ್ದೇನೆ ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ.
ನಟಿ ಖುಷ್ಬೂ ಸುಂದರ್, ತೆಲುಗು ನಟ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತದ ಕಲಾವಿದರನ್ನೂ ಇದೇ ರೀತಿ ಆಹ್ವಾನಿಸಿ ಗೌರವಿಸಿದರೆ ಆಗ ಸರಿ ಎನ್ನುತ್ತೇನೆ. ಭಾರತದ ಅಭಿವೃದ್ಧಿಗೆ ದಕ್ಷಿಣ ಭಾರತದವರ ಕೊಡುಗೆಯೂ ಇದೆ ಎಂಬುದನ್ನು ಮರೆಯಬಾರದು ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ದಕ್ಷಿಣ ಭಾರತದ ಹಲವು ಕಲಾವಿದರು ಈ ನಡೆಯನ್ನು ಬೆಂಬಲಿಸಿದ್ದಾರೆ.