` ಅಲ್ಲಿ ತಂದೆ ಸಾವು.. ಇಲ್ಲಿ ಕಾಮಿಡಿಯ ನೋವು.. ಗಣೇಶ್ ಹೇಳಿದ ಕಣ್ಣೀರ ಕಥೆ  - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
gimmick team reveals heart touching story
Ganesh Image from Gimmick ReleaseMeet

ಒಬ್ಬ ನಟನ ವೃತ್ತಿಪರತೆಗೆ ಆಗಾಗ್ಗೆ ಸವಾಲುಗಳು ಎದುರಾಗುತ್ತಲೇ ಇರುತ್ತವೆ. ಗಿಮಿಕ್ ಚಿತ್ರದ ಚಿತ್ರೀಕರಣದ ವೇಳೆ ನಾಗಣ್ಣ ಹೇಳಿದ ಕಥೆ ಕೇಳಿದರೆ.. ಕಣ್ಣೀರು ಬಾರದೇ ಇರದು. ಗಿಮಿಕ್ ಚಿತ್ರವನ್ನು ದೊಡ್ಡಬಳ್ಳಾಪುರದ ಬಳಿಯ ಬಂಗಲೆಯೊಂದರಲ್ಲಿ ಶೂಟ್ ಮಾಡುತ್ತಿದ್ದಾಗ, ಗಣೇಶ್ ಅವರಿಗೆ ತಂದೆಯ ಸಾವಿನ ಸುದ್ದಿ ಗೊತ್ತಾಯಿತು. ಆದರೆ, ಗಣೇಶ್ ಆ ದಿನದ ತಮ್ಮ ದೃಶ್ಯಗಳ ಶೂಟಿಂಗ್‍ನ್ನು ಮುಗಿಸಿಯೇ ಹೊರಟರಂತೆ.

ಅದಕ್ಕೆ ಕಾರಣವಿತ್ತು. ನಮಗೆ ಆ ಬಂಗಲೆ ಶೂಟಿಂಗ್‍ಗೆ ನೀಡಿದ್ದ ಕೊನೆಯ ದಿನವಾಗಿತ್ತು. ಎಲ್ಲ ಕಲಾವಿದರೂ ಅಲ್ಲಿಯೇ ಇದ್ದರು. ಅದನ್ನು ಮುಂದೂಡಿದರೆ.. ಇಡೀ ಚಿತ್ರತಂಡಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿತ್ತು. ಇದನ್ನೆಲ್ಲ ತಿಳಿದುಕೊಂಡಿದ್ದ ಗಣೇಶ್ ತಮ್ಮ ಪಾಲಿನ ದೃಶ್ಯಗಳನ್ನು ಮುಗಿಸಿಯೇ ತಂದೆಯ ಅಂತ್ಯ ಸಂಸ್ಕಾರಕ್ಕೆ ಹೊರಟರು ಎನ್ನುತ್ತಾರೆ ನಾಗಣ್ಣ.

ತಂದೆಯ ಸಾವಿನ ನೋವಿನ ನಡುವೆ ಆ ದಿನ ಗಣೇಶ್ ನಟಿಸಿದ್ದು ಕಾಮಿಡಿ ದೃಶ್ಯಗಳಲ್ಲಿ ಎನ್ನುವಾಗ ಭಾವುಕರಾಗಿದ್ದರು ನಾಗಣ್ಣ. ಆ ದಿನ ನಟಿಸುವುದು ಸುಲಭವಾಗಿರಲಿಲ್ಲ. ಕಲಾವಿದರ ಮನಸ್ಸು ಡಿಸ್ಟರ್ಬ್ ಆದರೆ ನಟಿಸುವುದು ಎಷ್ಟು ಕಷ್ಟ ಎನ್ನುವುದು ನನಗೆ ಆ ದಿನ ಅರಿವಾಯಿತು ಎಂದಿದ್ದಾರೆ ಗಣೇಶ್. 

ಗಣೇಶ್ ಅವರ ಈ ಘಟನೆ, ಈ ಹಿಂದೆ.. ಪ್ರೀತಿಯ ಮಗು ಮೃತಪಟ್ಟ ಸುದ್ದಿ ಕೇಳಿಯೂ, ರೊಮ್ಯಾಂಟಿಕ್ ದೃಶ್ಯದಲ್ಲಿ ನಟಿಸಿದ್ದ ಎನ್‍ಟಿಆರ್ ವೃತ್ತಿಪರತೆ ನೆನಪಿಸಿದೆ. ಗಿಮಿಕ್ ಇದೇ ವಾರ ಬಿಡುಗಡೆಯಾಗುತ್ತಿದೆ.

ನಿರ್ದೇಶಕರಿಗೆ ತಿಳಿದರೂ ಸೀನ್‍ಗೆ ಆ್ಯಕ್ಷನ್ ಕಟ್ ಹೇಳೋಕೆ ಆಗಲ್ಲ ಎಂದು ನಿರ್ದೇಶಕ ನಾಗಣ್ಣರಿಂದಲೂ ವಿಷಯ ಮುಚ್ಚಿಟ್ಟಿದ್ದರಂತೆ ಗಣೇಶ್. ನಿರ್ಮಾಪಕ ದೀಪಕ್ ಸಾಮಿ ಹಾಗೂ ನಟ ರವಿಶಂಕರ್ ಅವರಿಗೆ ಮಾತ್ರ ಗಣೇಶ್ ತಂದೆಯ ಸಾವಿನ ವಿಷಯ ಗೊತ್ತಿತ್ತಂತೆ.