ಸ್ವಾಗತಂ ಕೃಷ್ಣಾ.. ಶರಣಾಗತಂ ಕೃಷ್ಣಾ.. ಎಂದು ಕಾರುಣ್ಯ ರಾಮ್, ರಚನಾ ದರ್ಶನ್, ಶುಭಾ ಪೂಂಜಾ ಹಾಡುತ್ತಿದ್ದರೆ.. ನಾಚಿಕೊಳ್ಳುತ್ತಲೇ ರೋಮಾಂಚನಗೊಳ್ಳುತ್ತಾರೆ ರಾಜ್ ಬಿ.ಶೆಟ್ಟಿ. ಇದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಹಾಡು.. ಕನಸಿನ ಹಾಡು. ಆ ಕನಸಿನ ಹಾಡಿನಲ್ಲಿ ರಾಜ್ ಬಿ.ಶೆಟ್ಟಿಯ ಮನಸ್ಸು, ಹೃದಯಕ್ಕೆ ಲಗ್ಗೆ ಹಾಕುವುದು ಕಾರುಣ್ಯ ರಾಮ್, ರಚನಾ ದರ್ಶನ್, ಶುಭಾ ಪೂಂಜಾ.
ಇಲ್ಲಿಯೂ ಮೊಟ್ಟೆ ಶೆಟ್ಟರಿಗೆ ಒಳ್ಳೆಯ ಸಂಬಳ ಬರುವ ಕೆಲಸವಿದ್ದರೂ ಹುಡುಗಿ ಸಿಕ್ಕಿರೋದಿಲ್ಲ. ಹಾಗೆ ಹುಡುಗಿಯರೆ ಸಿಗದ ಬರಗಾಲದಲ್ಲಿರುವ ರಾಜ್ ಬಿ.ಶೆಟ್ಟಿ ಕನಸಿನಲ್ಲಿ ಇವರೆಲ್ಲ ಬಂದು ಡಿಸೈನ್ ಡಿಸೈನಾಗಿ ಸ್ವಾಗತ ಗೀತೆ ಹಾಡುತ್ತಾರೆ.
ನಿರ್ದೇಶಕ ಸುಜಯ್ ಶಾಸ್ತ್ರಿಯವರೇ ಹಾಡು ಬರೆದಿದ್ದು, ಮಣಿಕಾಂತ್ ಕದ್ರಿ ಸಂಗೀತವಿದೆ. ಮೈತ್ರಿ ಅಯ್ಯರ್ ಹಾಡಿರುವ ಹಾಡಿನಲ್ಲಿ ಯುವಕರ ಕನಸುಗಳೇ ತುಂಬಿವೆ.
ಆ ಕನಸುಗಳ ಚಿತ್ರ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ರಿಲೀಸ್ ಆಗುವುದು ಮುಂದಿನ ವಾರ. ರಾಜ್ ಬಿ.ಶೆಟ್ಟಿಗೆ ಇಲ್ಲಿ ಕವಿತಾ ಗೌಡ ನಾಯಕಿ. ಟಿ.ಆರ್.ಚಂದ್ರಶೇಖರ್ ನಿರ್ಮಾಣದ ಚಿತ್ರವಿದು.