ಅವರ ಹೆಸರು ರಾಬರ್ಟ್ ಬಕ್ಲಂಡ್. ಇಂಗ್ಲೆಂಡ್ ಪ್ರಧಾನಿ ಥೆರೇಸಾ ಮೇ ಇದ್ದಾರಲ್ಲ. ಅವರಿಗೆ ಕಾನೂನು ಸಲಹೆಗಾರ. ಸಾಲಿಸಿಟಿರ್ ಜನರಲ್. ಅಂತಹ ವ್ಯಕ್ತಿ ಲಂಡನ್ನಲ್ಲಿ ಲಂಬೋದರ ಚಿತ್ರಕ್ಕೆ ಏನೇನೆಲ್ಲ ಸಹಾಯ ಮಾಡಿದ್ದಾರೆ ಗೊತ್ತಾ..? ಅಚ್ಚರಿಯಾದರೂ ಇದು ಸತ್ಯ.
ಚಿತ್ರದ ಶೇ.70ರಷ್ಟು ಚಿತ್ರೀಕರಣ ಲಂಡನ್ನಲ್ಲಿಯೇ ಆಗಿದೆ. ಚಿತ್ರೀಕರಣದ ಅನುಮತಿಗಾಗಿ ಹೋದಾಗ ರಾಬರ್ಟ್ ಅವರಿಗೆ ಚಿತ್ರದ ಕಂಟೆಂಟ್ ವಿವರಿಸಿದ್ದಾರೆ ನಿರ್ದೇಶಕರು ಮತ್ತು ನಿರ್ಮಾಪಕರು. ಕಥೆ ಇಷ್ಟವಾಗಿದ್ದೇ ತಡ, ಇಂಗ್ಲೆಂಡ್ನಲ್ಲಿ ಶೂಟಿಂಗ್ ನಡೆಯೋ ಜಾಗಗಳಲ್ಲಿ ಅತಿ ಕಡಿಮೆ ಖರ್ಚಿನಲ್ಲಿ ಅನುಮತಿ ಕೊಡಿಸಿದ್ದಾರೆ ರಾಬರ್ಟ್. 100 ಪೌಂಡ್ ಖರ್ಚಾಗುವ ಜಾಗದಲ್ಲಿ 10 ಪೌಂಡ್ ಎಂಬಷ್ಟರ ಮಟ್ಟಿಗೆ ಖರ್ಚು ಕಡಿಮೆ ಮಾಡಿಸಿದ್ದಾರೆ.
ಸಿನಿಮಾ ರೆಡಿಯಾದ ಮೇಲೆ ಒಂದ್ಸಲ ಸಿನಿಮಾ ತೋರಿಸಿ ಅನ್ನೋದು ಅವರ ಬೇಡಿಕೆ. ಲಂಡನ್ನಲ್ಲಿ ಪ್ರೀಮಿಯರ್ ಶೋ ನಡೆಸಲಾಗಿದೆಯಾದರೂ, ಆ ದಿನ ಅವರು ಬರಲು ಸಾಧ್ಯವಾಗಿಲ್ಲ. ಅವರಿಗೆ ಸಿನಿಮಾ ತೋರಿಸ್ತೇವೆ ಎಂದಿದ್ದಾರೆ ನಿರ್ದೇಶಕ ರಾಜ್ಸೂರ್ಯ. ಸಂತೋಷ್, ಶೃತಿ ಪ್ರಕಾಶ್ ಚಿತ್ರದ ನಾಯಕ, ನಾಯಕಿ. ಇದೇ ಶುಕ್ರವಾರ ಸಿನಿಮಾ ತೆರೆಗೆ ಬರುತ್ತಿದೆ.