1978.. ಎಮರ್ಜೆನ್ಸಿ ಮುಗಿದ ನಂತರ ನಡೆದ ಎಲೆಕ್ಷನ್‍ನಲ್ಲಿ ಇಂದಿರಾ ಗಾಂಧಿ ಸೋತು ಸುಣ್ಣವಾಗಿ ಹೋಗಿದ್ದರು. ಪ್ರಧಾನಿಯಾಗಿದ್ದ ಇಂದಿರಾ, ಲೋಕಸಭೆ ಸದಸ್ಯತ್ವವನ್ನೂ ಗಳಿಸಲಾಗದೆ ಸೋತಿದ್ದರು. ಆಗ ಅವರಿಗೆ ನೆನಪಾಗಿತ್ತು ಕರ್ನಾಟಕ. ಚಿಕ್ಕಮಗಳೂರು ಕ್ಷೇತ್ರ ಇದೆಯಲ್ಲ (ಈಗಿನ ಉಡುಪಿ-ಚಿಕ್ಕಮಗಳೂರು) ಅಲ್ಲಿಗೆ ಆಗ ಡಿ.ಬಿ.ಚಂದ್ರೇಗೌಡ ಸಂಸದರು. ಅವರನ್ನು ರಾಜೀನಾಮೆ ಕೊಡಿಸಿ, ಆ ಕ್ಷೇತ್ರಕ್ಕೆ ತಾವು ನಿಂತಿದ್ದರು ಇಂದಿರಾ. ಡಿ.ಬಿ.ಚಂದ್ರೇಗೌಡ ಈಗ ಕಾಂಗ್ರೆಸ್ ತೊರೆದು ಬಿಜೆಪಿಯಲ್ಲಿದ್ದಾರೆ. ಅದು ಬೇರೆಯದ್ದೇ ಕಥೆ.
ಯಾವಾಗ ಇಂದಿರಾ ಕರ್ನಾಟಕದಿಂದ ಸ್ಪರ್ಧಿಸುತ್ತಾರೆ ಎನ್ನುವುದು ಪಕ್ಕಾ ಆಯಿತೋ.. ಆಗಿನ ಕಾಲದ ಅತಿರಥ ಮಹಾರಥ ನಾಯಕರ ಕಣ್ಣು ಬಿದ್ದಿದ್ದು ಡಾ.ರಾಜ್ ಕುಮಾರ್ ಮೇಲೆ. ಜಾರ್ಜ್ ಫರ್ನಾಂಡಿಸ್ ಸೇರಿದಂತೆ ಘಟಾನುಘಟಿ ನಾಯಕರೆಲ್ಲ ಡಾ.ರಾಜ್ ಮನೆಗೆ ಎಡತಾಕತೊಡಗಿದರು. ಡಾ.ರಾಜ್ ಅವರೇನೋ ನೋ ಎಂದಿದ್ದರು. ಆದರೆ, ನಾಯಕರ ಪ್ರಯತ್ನ ನಿಂತಿರಲಿಲ್ಲ. ಇದರಿಂದ ಬೇಸತ್ತ ಡಾ.ರಾಜ್, ಶೂಟಿಂಗ್ ಸೆಟ್‍ನಿಂದ ಏಕಾಏಕಿ ಉಟ್ಟಬಟ್ಟೆಯಲ್ಲಿಯೇ ನಾಪತ್ತೆಯಾಗಿಬಿಟ್ಟಿದ್ದರು. ನಾಮಪತ್ರ ಸಲ್ಲಿಕೆ ದಿನ ಮುಗಿಯುವವರೆಗೆ ಯಾರ ಕಣ್ಣಿಗೂ ಬಿದ್ದಿರಲಿಲ್ಲ.
ಇತ್ತ, ಡಾ.ರಾಜ್ ಅವರನ್ನು ಚುನಾವಣೆಗೆ ನಿಲ್ಲದಂತೆ ಹೇಳಿ ಎಂದು ಇಂದಿರಾ ಗಾಂಧಿ, ಎಂಜಿಆರ್ ಮೊದಲಾದವರ ಮೂಲಕ ಒತ್ತಡ ಹೇರುತ್ತಿದ್ದರು. ಕೊನೆಗೆ ಡಾ.ರಾಜ್, ರಾಜಕೀಯಕ್ಕೆ ಬರಲೇ ಇಲ್ಲ. ಕೇವಲ ಕನ್ನಡಿಗರ ಹೃದಯ ಸಿಂಹಾಸನದ ಚಕ್ರವರ್ತಿಯಾಗಿ ಉಳಿದುಬಿಟ್ಟರು.
ತಾನೇಕೆ ರಾಜಕೀಯಕ್ಕೆ ಬರಲಿಲ್ಲ ಎಂಬ ಬಗ್ಗೆ ಡಾ.ರಾಜ್ ತಮ್ಮ ಪುತ್ರ ರಾಘವೇಂದ್ರ ರಾಜ್‍ಕುಮಾರ್ ಬಳಿ ಹೇಳಿಕೊಂಡಿದ್ದರಂತೆ. ನನ್ನಿಂದ ಏನೋ ಒಳ್ಳೆಯದಾಗುತ್ತೆ ಎನ್ನವುದಾದರೆ ನಾನು ಮಾಡಲು ಸಿದ್ಧ. ಆದರೆ, ಇವರಿಗೆ ಇಂದಿರಾ ಗಾಂಧಿಯವರನ್ನು ಸೋಲಿಸುವುದಕ್ಕೊಬ್ಬ ನಾಯಕ ಬೇಕು, ಅಷ್ಟೆ. ಮಿಗಿಲಾಗಿ, ನನಗೆ ರಾಜಕೀಯದಲ್ಲಿ ಒಳ್ಳೆಯ ಕೆಲಸ ಮಾಡುವಷ್ಟು ಶಿಕ್ಷಣವೂ ಇಲ್ಲ. ಹೀಗಾಗಿ ನಾನು ಇಂದಿರಾ ಗಾಂಧಿಯ ವಿರುದ್ಧ ನಿಲ್ಲಲಿಲ್ಲ ಎಂದಿದ್ದರಂತೆ.
ನನಗೆ ಶಿಕ್ಷಣವಿಲ್ಲ. ಬೇರೊಬ್ಬರ ಕೈಯ್ಯಲ್ಲಿ ದಾಳವಾಗುವುದು ಬೇಕಿಲ್ಲ ಎಂಬೆಲ್ಲ ಕಾರಣಕ್ಕೆ ರಾಜಕಾರಣದಿಂದ ದೂರವಿದ್ದ ಅದೇ ಡಾ.ರಾಜ್, ಗೋಕಾಕ್ ಚಳವಳಿಗೆ ಬನ್ನಿ ಎಂದಾಗ ಎರಡನೇ ಮಾತನಾಡದೆ ಮುಂಚೂಣಿಗೆ ನಿಂತಿದ್ದರು.
ಅಲ್ಲಿ ನನ್ನನ್ನು ದುರ್ಬಳಕೆ ಮಾಡಿಕೊಳ್ಳುವ ಯಾವುದೇ ಸುಳಿವೂ ಇರಲಿಲ್ಲ. ನನ್ನ ಹಿಂದೆ ದೊಡ್ಡ ದೊಡ್ಡ ಸಾಹಿತಿಗಳಿದ್ದರು. ಕಾರಂತರಂತಹವರೆಲ್ಲ ಇದ್ದರು. ಅವರೆಲ್ಲರಲ್ಲೂ ಒಂದು ಪ್ರಾಮಾಣಿಕತೆ, ಬದ್ಧತೆ ಇತ್ತು. ನಾನು ಅವರು ಹೇಳಿದಂತೆ ಕೇಳಿದೆ ಅಷ್ಟೆ ಎನ್ನುವ ಮೂಲಕ ಸರಳತೆ ಮೆರೆದಿದ್ದರು. ಅವರ ಆ ಮುಗ್ಧತೆಯೇ ಎಲ್ಲರಿಗೂ ಇಷ್ಟವಾಗಿತ್ತು.
ಅಂದಹಾಗೆ, ಸುಮಲತಾ ಪರ ಪುನೀತ್ ಕೂಡಾ ಪ್ರಚಾರ ಮಾಡುತ್ತಾರೆ ಎಂಬ ವಿಷಯಕ್ಕೆ ಪುನೀತ್ ಸ್ಪಷ್ಟನೆ ಕೊಟ್ಟಿದ್ದಾರೆ. ಹೀಗಾಗಿ ಇದೆಲ್ಲವೂ ನೆನಪಾಯಿತು. 2013ರಲ್ಲಿ ಪುನೀತ್ ಚುನಾವಣಾ ಆಯೋಗದ ಪ್ರಚಾರದ ರಾಯಭಾರಿಯಾಗಿದ್ದರು. ಆದರೆ, ಅಮೆರಿಕದಿಂದ ಹೊರಡಬೇಕಿದ್ದ ವಿಮಾನ ಏಕಾಏಕಿ ರದ್ದಾಗಿ ಮತದಾನವನ್ನೇ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆಯೋಗದವರು ಹಾಗೂ ಕರ್ನಾಟಕದ ಜನತೆಯ ಕ್ಷಮೆ ಕೇಳಿದ್ದರು ಪುನೀತ್. ಈಗ ಮತ್ತೊಮ್ಮೆ ರಾಜಕೀಯದಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದಾರೆ.
Relaed Articles :-