ಯಜಮಾನನ ಜೊತೆ ಜೊತೆಯಲ್ಲೇ ಅಮರ್ ಚಿತ್ರದ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ. ಅಭಿಷೇಕ್ ಅಂಬರೀಷ್ ಮೊದಲ ಅಭಿನಯದ ಅಮರ್ ಚಿತ್ರಕ್ಕೆ ಡೈರೆಕ್ಟರ್ ಆಗುವ ಅದೃಷ್ಟ ಪಡೆದ ನಾಗಶೇಖರ್, ಮೊದಲ ಚಿತ್ರದಲ್ಲಿಯೇ ಅಭಿಷೇಕ್ ಅವರಿಗೆ ನರಕ ತೋರಿಸಿಬಿಟ್ಟಿದ್ದೇನೆ ಎಂದಿದ್ದಾರೆ. ಹಾಗಂತ ಏನೇನೋ ಅಂದ್ಕೋಬೇಡಿ.. ಅಷ್ಟು ಕಷ್ಟ ಕೊಟ್ಟಿದ್ದೇನೆ. ಅಭಿಷೇಕ್ ಅದಷ್ಟೂ ಕಷ್ಟಗಳನ್ನೂ ಇಷ್ಟಪಟ್ಟು ಮಾಡಿದ್ದಾರೆ ಎಂದಿದ್ದಾರೆ ನಾಗಶೇಖರ್.
ಅಮರ್ ಚಿತ್ರದ ಚಿತ್ರೀಕರಣ 20 ದಿನ ಮಡಿಕೇರಿಯಲ್ಲಿ ಆಗಿದೆ. ಅದೂ ಕೊಡಗು ಪ್ರವಾಹಕ್ಕೆ ಮುನ್ನ. ಅಂದರೆ ಪ್ರವಾಹಕ್ಕೆ ಮುನ್ನ ಕೊಡಗು ಹೇಗಿತ್ತು ಅನ್ನೋದು ಅಮರ್ ಚಿತ್ರದಲ್ಲಿ ತಿಳಿಯಲಿದೆ. ಹೆಚ್ಚೂ ಕಡಿಮೆ ಒಂದು ತಿಂಗಳು ಅಭಿಷೇಕ್ ಮತ್ತು ತಾನ್ಯಾ ಹೋಪ್ ರಿಯಲ್ ಮಳೆಯಲ್ಲಿ ನೆನೆದುಕೊಂಡೇ ನಟಿಸಿದ್ದಾರೆ. ಅದು ಅವರ ಬದ್ಧತೆಗೆ ಸಾಕ್ಷಿ ಎಂದಿದ್ದಾರೆ ನಾಗಶೇಖರ್. ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರ, ಅಂಬರೀಷ್ ಪುತ್ರನ ಮೊದಲ ಸಿನಿಮಾ ಎನ್ನುವ ಕಾರಣಕ್ಕೇ ಆಕಾಶದೆತ್ತರದಷ್ಟು ನಿರೀಕ್ಷೆ ಹುಟ್ಟಿಸಿದೆ.