ಸೀತಾರಾಮ ಕಲ್ಯಾಣ ಚಿತ್ರ, ಆಂಜನೇಯನ ಪರಮಭಕ್ತರ ಸಂಗಮವೇನೋ ಎನ್ನಿಸುವ ಹಾಗಿದೆ. ಹೇಳಿ ಕೇಳಿ.. ನಿರ್ದೇಶಕ ಹರ್ಷ ಭಜರಂಗಿಯ ಭಕ್ತ. ಇದುವರೆಗೆ ಅವರು ನಿರ್ದೇಶಿಸಿರುವ ಪ್ರತಿ ಚಿತ್ರದ ಹೆಸರಲ್ಲೂ ಆಂಜನೇಯ ಇರೋದೇ ಅದಕ್ಕೆ ಸಾಕ್ಷಿ. ಇನ್ನು ಸೀತಾರಾಮ ಕಲ್ಯಾಣದಲ್ಲೂ ಅಷ್ಟೆ, ಅದು ಆಂಜನೇಯನ ಆರಾಧ್ಯ ದೈವಗಳ ಹೆಸರು. ಹೀಗಿರುವಾಗ ಈ ಚಿತ್ರವನ್ನು ರಚಿತಾ ಒಪ್ಪಿಕೊಂಡಿದ್ದು ಹೇಗೆ..?
``ಕಥೆ ಕೇಳಲಿಲ್ಲ, ಕೇವಲ ಟೈಟಲ್ ಕೇಳಿದೆ. ಸೀತಾರಾಮ ಕಲ್ಯಾಣ ಅನ್ನೋ ಟೈಟಲ್ ಬಹಳ ಇಷ್ಟವಾಯ್ತು. ಟೈಟಲ್ ಕೇಳಿದವಳೇ ಓಕೆ ಎಂದುಬಿಟ್ಟೆ, ಏಕಂದ್ರೆ ನಾನು ಆಂಜನೇಯನ ಭಕ್ತೆ'' ಎಂಬ ಕಥೆ ಒಪ್ಪಿಕೊಂಡ ರಹಸ್ಯ ಹೇಳಿದ್ದಾರೆ ರಚಿತಾ.
ಚಿತ್ರದಲ್ಲಿ ನನ್ನದು ಹಳ್ಳಿ ಹುಡುಗಿಯ ಪಾತ್ರ. ಲಂಗ, ದಾವಣಿ, ಬಿಂದಿ, ತಲೆ ತುಂಬಾ ಹೂವು.. ಹೀಗೆ ಪಕ್ಕಾ ಹಳ್ಳಿ ಹುಡುಗಿ. ಅಯೋಗ್ಯದ ನಂತರ ಮತ್ತೊಮ್ಮೆ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಹಳ್ಳಿ ಹುಡುಗಿಯಾಗಿ ಚೆಂದವಾಗಿ ಕಾಣಿಸ್ತೀನಂತೆ. ಹಾಗಾಗಿ ಇನ್ನು ಮುಂದೆ ಇನ್ನೊಂದಿಷ್ಟು ಹಳ್ಳಿ ಕ್ಯಾರೆಕ್ಟರ್‍ಗಳಲ್ಲಿ ನಟಿಸುವ ಆಸೆ ಇದೆ ಎಂದು ಬಯಕೆ ಹೇಳಿಕೊಂಡಿದ್ದಾರೆ ರಚಿತಾ.
ನಿಖಿಲ್ ಅವರಿಗೆ ಇದು 2ನೇ ಸಿನಿಮಾ. ಆದರೆ, ಅಭಿನಯ ನೋಡಿದರೆ ಹಾಗನ್ನಿಸೋದಿಲ್ಲ. ಪಾತ್ರಕ್ಕೆ ತಕ್ಕಂತೆ ಚೆನ್ನಾಗಿ ನಟಿಸಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಅಭಿನಯಕ್ಕೂ ಮೆಚ್ಚುಗೆ ಕೊಟ್ಟಿದ್ದಾರೆ ಡಿಂಪಲ್ ಕ್ವೀನ್.