ರಶ್ಮಿಕಾ ಮಂದಣ್ಣ, ಕನ್ನಡಿಗರು ಮತ್ತು ತೆಲುಗರ ಹಾರ್ಟ್ ಫೇವರಿಟ್ ನಟಿ. ಸಿನಿಮಾಗಳ ಮೂಲಕ ಇಲ್ಲವೇ ವಿವಾದಗಳ ಮೂಲಕ ಸುದ್ದಿಯಲ್ಲಿದ್ದೇ ಇರುತ್ತಾರೆ. ಈ ಬಾರಿ ಒಂದೊಳ್ಳೆ ಸುದ್ದಿಯಿಂದ ಸದ್ದು ಮಾಡಿದ್ದಾರೆ ರಶ್ಮಿಕಾ.
ರಸ್ತೆ ಬದಿಯ ಅಶಕ್ತರಿಗೆ ರಶ್ಮಿಕಾ ಮಂದಣ್ಣ ಊಟ ಬಡಿಸುತ್ತಿರುವ ಫೋಟೋಗಳನ್ನು ಅಭಿಮಾನಿಗಳು ಸೆರೆ ಹಿಡಿದು, ರಶ್ಮಿಕಾಗೇ ಟ್ಯಾಗ್ ಮಾಡಿದ್ದಾರೆ. ನಾವು ನಿಮ್ಮ ಅಭಿಮಾನಿ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಿದೆ. ಪೂರ್ತಿ ವಿವರ ನೀಡಿ ಎಂದು ಡಿಮ್ಯಾಂಡ್ ಮಾಡಿದ್ದಾರೆ.
ಫೋಟೋಗೆ ಅಚ್ಚರಿ ವ್ಯಕ್ತಪಡಿಸಿರುವ ರಶ್ಮಿಕಾ, ಸಂಪೂರ್ಣ ವಿವರ ನೀಡಿಲ್ಲ. ನಿಮಗೆ ಫೋಟೋ ಎಲ್ಲಿ ಸಿಕ್ಕಿತು ಎಂದು ಅಚ್ಚರಿ ವ್ಯಕ್ತಪಡಿಸಿರುವ ರಶ್ಮಿಕಾ, ಪ್ರತಿದಿನ ಬಿಸಿಲಿನಲ್ಲಿ ಆ ಕುಟುಂಬಗಳು ಬಳಲುವುದನ್ನು ನೋಡುತ್ತಿದ್ದೆ. ಅವರು ಕ್ಯಾನ್ಸರ್ ಪೀಡಿತ ಕುಟುಂಬದವರು. ಬಡವರು. ಏನಾದರೂ ಮಾಡಬೇಕು ಎನ್ನಿಸಿತು. ತೋಚಿದ್ದು ಮಾಡಿದ್ದೇನೆ ಅಷ್ಟೆ ಎಂದಿದ್ದಾರೆ ರಶ್ಮಿಕಾ.