ಪಂಚತಂತ್ರ ಚಿತ್ರದಿಂದ, ಶೃಂಗಾರದ ಹೊಂಗೆಮರದಲ್ಲಿ ಹೂ ಬಿಡಿಸಿ, ಚಳಿಗಾಲದಲ್ಲೂ ಮೈ ಬೆಚ್ಚಗಾಗಿಸಿರುವ ಯೋಗರಾಜ್ ಭಟ್, ಹೊಸ ಸಿನಿಮಾ ಆರಂಭಿಸುತ್ತಿದ್ದಾರೆ. ಗಾಳಿಪಟ-2. ಶರಣ್, ಪವನ್ ಕುಮಾರ್ (ಯು ಟರ್ನ್ ನಿರ್ದೇಶಕ), ರಿಷಿ (ಅಲಮೇಲಮ್ಮ ಖ್ಯಾತಿ) ಗಾಳಿಪಟ 2 ಹೀರೋಗಳು. ತಮ್ಮದೇ ನಿರ್ದೇಶನದ, ದಾಖಲೆ ಬರೆದಿದ್ದ ಗಾಳಿಪಟ ಚಿತ್ರದ ಟೈಟಲ್‍ನ್ನು ಮತ್ತೊಮ್ಮೆ ತಾವೇ ಕೈಗೆತ್ತಿಕೊಂಡಿದ್ದಾರೆ ಯೋಗರಾಜ್ ಭಟ್.
ವಿಶೇಷದ ಮೇಲೆ ವಿಶೇಷವೆಂದರೆ, ಈ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯಾ.
ಭಟ್ಟರ ಚಿತ್ರಗಳಿಗೆ ಇದುವರೆಗೆ ಸಂಗೀತ ನೀಡಿರುವುದು ಮನೋಮೂರ್ತಿ, ಸಂದೀಪ್ ಚೌಟ ಹಾಗೂ ಭಟ್ಟರ ಆಪ್ತಮಿತ್ರರೂ ಆಗಿರುವ ಹರಿಕೃಷ್ಣ. ಭಟ್ಟರು ಮತ್ತು ಹರಿಕೃಷ್ಣ ಕಾಂಬಿನೇಷನ್, ಹಲವು ಚಿತ್ರಗಳ ನಂತರ ಇದೇ ಮೊದಲ ಬಾರಿಗೆ ಗ್ಯಾಪ್ ಆಗುತ್ತಿದೆ.
ಹಾಗಂತ ಅರ್ಜುನ್ ಜನ್ಯಾ, ಭಟ್ಟರಿಗೆ ಹೊಸಬರೇನಲ್ಲ. ಭಟ್ಟರ ಕ್ಯಾಂಪಿನ ಹಲವರ ಜೊತೆ ಜನ್ಯಾ ಕೆಲಸ ಮಾಡಿದ್ದಾರೆ. ಅರ್ಜುನ್ ಜನ್ಯಾ ಅವರ ಹಲವಾರು ಸೂಪರ್ ಹಿಟ್ ಹಾಡುಗಳಿಗೆ ಭಟ್ಟರು ಸಾಹಿತ್ಯ ಕೊಟ್ಟಿದ್ದಾರೆ. ಅವರ ನಿರ್ದೇಶನಕ್ಕೆ, ಇವರ ಸಂಗೀತ ನಿರ್ದೇಶನವಷ್ಟೇ ಓಂ ಪ್ರಥಮ.
ಇದೆಲ್ಲದರ ಜೊತೆಗೆ ಚಿತ್ರದ ನಿರ್ಮಾಪಕ ಮಹೇಶ್ ದಾನಣ್ಣವರ್ ಹಾಗೂ ಅರ್ಜುನ್ ಜನ್ಯಾ, ಆಪ್ತಸ್ನೇಹಿತರು. ಇದೂ ಕೂಡಾ ಭಟ್ಟರ ಚಿತ್ರಕ್ಕೆ, ಅರ್ಜುನ್ ಜನ್ಯಾ ಸಂಗೀತ ನೀಡಲು ಕಾರಣವಾಗಿದೆ.