ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ, ರಿಲೀಸ್ಗೂ ಮೊದಲೇ ಲೀಕ್ ಆಗಿಬಿಡ್ತಾ..? ಚಿತ್ರರಂಗವನ್ನು ಬೇತಾಳದಂತೆ ಕಾಡುತ್ತಿರುವ ಪೈರಸಿ ಭೂತ, ಕೆಜಿಎಫ್ನ್ನು ಆಕ್ರಮಿಸಿತಾ..? ಒಂದು ದೊಡ್ಡ ಆತಂಕ ಕಾಡೋಕೆ ಶುರುವಾಗಿದೆ. ಅದಕ್ಕೆ ಕಾರಣ ಆನ್ಲೈನ್ನಲ್ಲಿ ಕಾಣಿಸಿಕೊಂಡ ಎರಡು ಫೋಟೋಗಳು.
ಆ ಫೋಟೋಗಳ ಮೇಲೆ ಇದುವರೆಗೆ ಟ್ರೇಲರ್ನಲ್ಲಿ ಕಾಣಿಸದೇ ಇರುವ ದೃಶ್ಯವಿದೆ. ಜೊತೆಗೆ ಸೆನ್ಸಾರ್ ಕಾಪಿ ಎನ್ನುವುದೂ ಕಾಣುತ್ತಿದೆ. ಹಾಗಾದರೆ, ಕೆಜಿಎಫ್ ಲೀಕ್ ಆಗಿದೆಯಾ..?
ಕೋಟಿ ಕೋಟಿ ಬಂಡವಾಳ ಸುರಿದು, ಕನ್ನಡ ಚಿತ್ರರಂಗ ಯಾವುದಕ್ಕೂ.. ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸಲು ಹೊರಟ ವಿಜಯ್ ಕಿರಗಂದೂರುಗೆ ಇದು ದೊಡ್ಡ ಶಾಕ್.
ಇತ್ತೀಚೆಗೆ ಬಿಡುಗಡೆಯಾಗುವ ಪ್ರತಿ ದೊಡ್ಡ ಚಿತ್ರವನ್ನೂ ಆನ್ಲೈನ್ನಲ್ಲಿ ಲೀಕ್ ಮಾಡುವ ಹ್ಯಾಕರ್ಗಳ ದೊಡ್ಡ ತಂಡವೇ ಜಗತ್ತಿನ ವಿವಿಧೆಡೆ ಕೆಲಸ ಮಾಡುತ್ತಿದೆ. ಕೆಜಿಎಫ್, ಇಂತಹ ಪೈರಸಿಕಳ್ಳರ ವಿರುದ್ಧವೂ ಎಚ್ಚೆತ್ತುಕೊಳ್ಳಲೇಬೇಕು. ರಿಲೀಸ್ಗೆ ತಲೆಕೆಡಿಸಿಕೊಳ್ಳುವಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು, ಈ ವಿಚಾರದ ಬಗ್ಗೆ ಎಚ್ಚರವಹಿಸಬೇಕು.