ಅವರು ಬಿಡಿ, ಅವರ ಅಪ್ಪ ಇಂಡಸ್ಟ್ರಿಯಲ್ಲೇ ಇದ್ದವರು. ಹೀಗಾಗಿ ಸಲೀಸಾಗಿ ಬಂದು ಬಿಟ್ರು. ಇಂಥ ಮಾತನ್ನು ಹಲವರು ಹೇಳ್ತಾ ಇರ್ತಾರೆ. ನಮ್ಮ ಅಪ್ಪಂದಿರು ಇಂಡಸ್ಟ್ರಿಯಲ್ಲಿ ಇರೋ ಕಾರಣಕ್ಕೆ ನಾವು ಪಟ್ಟಿರೋ ಕಷ್ಟವೇ ಬೇರೆ. ಅಪ್ಪ ಇಂಡಸ್ಟ್ರಿಯಲ್ಲಿದ್ರೆ ಬೆಳೆಯೋದು ಅಷ್ಟು ಸುಲಭ ಅಲ್ಲ' ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ ಮಾತು.
ದರ್ಶನ್ ಈ ಮಾತು ಹೇಳಿದ್ದು ಚಾಣಾಕ್ಷ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ. ಅದು ಕೀರ್ತಿರಾಜ್ ಅವರ ಪುತ್ರ ಧರ್ಮ ಅಭಿನಯದ ಚಿತ್ರ. ನವಗ್ರಹ ಚಿತ್ರದಲ್ಲಿ ಕಣ್ ಕಣ್ಣ ಸಲಿಗೆ ಎಂದಿದ್ದ ಧರ್ಮ ಕೀರ್ತಿರಾಜ್, ಈ ಚಿತ್ರದಲ್ಲಿ ಆ್ಯಕ್ಷನ್ ಹೀರೋ. ಚಿತ್ರದ ಟ್ರೇಲರ್, ಹಾಡುಗಳು, ಆ್ಯಕ್ಷನ್ ಎಲ್ಲವೂ ಚೆನ್ನಾಗಿದೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ ದರ್ಶನ್, ತಂದೆಯ ನೆರಳು.. ಅದರಲ್ಲೂ ಚಿತ್ರರಂಗದಲ್ಲಿ ಮಕ್ಕಳನ್ನು ಹೇಗೆ ಕಾಡುತ್ತೆ ಅನ್ನೋದನ್ನ ಬಿಚ್ಚಿಟ್ಟರು.
ನಾವು ಮಾಡಿದ ಪ್ರತೀ ಕೆಲಸವನ್ನೂ ತಮ್ಮ ತಂದೆಗೆ ಹೋಲಿಸಿ ಮಾತನಾಡುತ್ತಾರೆ. ಅವರ ತಂದೆ ಹಾಗೆ ಮಾಡ್ತಾ ಇದ್ರು. ಇವನ್ಯಾಕೆ ಹೀಗೆ ಎಂದುಬಿಟ್ಟರೆ ನಮ್ಮ ಕಥೆ ಮುಗಿಯಿತು ಅಂದ್ರು ದರ್ಶನ್. ಅಫ್ಕೋರ್ಸ್.. ದರ್ಶನ್ ಮಾತುಗಳಲ್ಲಿ ಅರ್ಥವಿದೆ. ಅವರ ವಿಚಾರವನ್ನೇ ತೆಗೆದುಕೊಂಡರೆ ತೂಗುದೀಪ ಶ್ರೀನಿವಾಸ್ ಪ್ರತಿಭೆ, ತಾಕತ್ತೇ ಬೇರೆ. ದರ್ಶನ್ ಪ್ರತಿಭೆ, ತಾಕತ್ತೇ ಬೇರೆ. ಹೋಲಿಸಿ ನೋಡಿದರೆ.. ನೋಡಲು ಹೋದರೆ.. ಯಾರು ಹೆಚ್ಚು.. ಯಾರು ಕಡಿಮೆ ಎಂದು ಲೆಕ್ಕ ಹಾಕುತ್ತಾ ಕೂತರೆ.. ಹ್ಞಾಂ.. ಅದನ್ನೇ ದರ್ಶನ್ ಹೇಳಿದ್ದು. ಹೋಲಿಕೆ ಮಾಡಬಾರದು.