ದಿ ವಿಲನ್, ಕೆಜಿಎಫ್ ನಂತರ ಕನ್ನಡದಲ್ಲಿ ಮತ್ತೊಂದು ಭಾರಿ ಬಜೆಟ್ ಸಿನಿಮಾ ಸೆಟ್ಟೇರೋಕೆ ಸಿದ್ಧವಾಗಿದೆ. ಈಗಾಗಲೇ ಅವನೇ ಶ್ರೀಮನ್ನಾರಾಯಣ, 777 ಚಾರ್ಲಿ ಎಂಬ ದೊಡ್ಡ ಬಜೆಟ್ ಚಿತ್ರಗಳಲ್ಲಿಯೇ ತೊಡಗಿಸಿಕೊಂಡಿರುವ ರಕ್ಷಿತ್ ಶೆಟ್ಟಿ, ಈಗ 100 ಕೋಟಿ ಬಜೆಟ್ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ರಕ್ಷಿತ್ ಶೆಟ್ಟಿ ನಿರ್ದೇಶಿಸಿ, ನಟಿಸಲು ನಿರ್ಧರಿಸಿರುವ ಪುಣ್ಯಕೋಟಿ ಚಿತ್ರದ ಬಜೆಟ್ 100 ಕೋಟಿಯಂತೆ.
ಪುಣ್ಯಕೋಟಿಗೆ 100 ಕೋಟಿ ಅನ್ನೋಕೂ ಕಾರಣಗಳಿವೆ. ಏಕೆಂದರೆ ಕಥೆ 300 ವರ್ಷಗಳ ಹಿಂದಿನದ್ದು. ಆ ಕಾಲದಲ್ಲಿ ನಡೆದಿದ್ದ ಯುದ್ಧವೊಂದನ್ನು ಮರುಸೃಷ್ಟಿಸುವುದು ಈಗಿನ ಸವಾಲು. ಜೊತೆಯಲ್ಲೇ ಪುಣ್ಯಕೋಟಿ ಗೋವು ಮತ್ತು ಹುಲಿರಾಯನದ ಕಥೆಯನ್ನೂ ಅಳವಡಿಸಿಕೊಂಡು ಕಥೆ ಹೇಳಲಾಗುತ್ತೆ. ಹೀಗಾಗಿ ಚಿತ್ರದ ಬಜೆಟ್ ಮಿನಿಮಮ್ 80ರಿಂದ 100 ಕೋಟಿ ಎನ್ನಲಾಗುತ್ತಿದೆ. ಸಿನಿಮಾ ಮುಂದಿನ ವರ್ಷ ಸೆಟ್ಟೇರಲಿದೆ.