ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ರಾಜಕುಮಾರ, ರಾಮಾಚಾರಿ ಖ್ಯಾತಿಯ ಸಂತೋಷ್ ಆನಂದ್ರಾಮ್, ಕನ್ನಡ ಚಿತ್ರರಂಗದ ಪ್ರತಿಷ್ಠಿತ ಪ್ರೊಡಕ್ಷನ್ ಸಂಸ್ಥೆಯಾಗಿರುವ ಹೊಂಬಾಳೆ ಪ್ರೊಡಕ್ಷನ್ಸ್ನ ನಿರ್ಮಾಪಕ ವಿಜಯ್ ಕಿರಗಂದೂರು.. ಈ ತ್ರಿವೇಣಿ ಸಂಗಮದ ಹೊಸ ಸಿನಿಮಾದ ಟೈಟಲ್ ಯುವರತ್ನ.
ಈ ಸಿನಿಮಾದ ಟೈಟಲ್ ಜ್ವಾಲಾಮುಖಿ, ದೇವತಾ ಮನುಷ್ಯ, ಪರಶುರಾಮ್, ಕ್ರಾಂತಿವೀರ ಎಂಬೆಲ್ಲ ಸುದ್ದಿಗಳು ಗಾಂಧಿನಗರದ ತುಂಬೆಲ್ಲ ಹರಿದಾಡಿದ್ದವು. ಆ ಎಲ್ಲವನ್ನೂ ಮೀರಿ ಹೊಸದೇ ಟೈಟಲ್ ಇಟ್ಟಿದ್ದಾರೆ ಸಂತೋಷ್ ಆನಂದ್ರಾಮ್. ಡಾ.ರಾಜ್ಕುಮಾರ್ ಕರ್ನಾಟಕ ರತ್ನ ಪುರಸ್ಕಾರ ಸ್ವೀಕರಿಸಿದ್ದ ಹೆಮ್ಮೆಯ ಕಲಾವಿದ. ಅವರ ಪುತ್ರ ಪುನೀತ್, ಈಗ ಯುವರತ್ನರಾಗುತ್ತಿದ್ದಾರೆ.
ಅಪ್ಪು ಅಭಿಮಾನಿಗಳಾದ ವಿನುತಾ ಮತ್ತು ಮಹೇಶ್ ಎಂಬ ಇಬ್ಬರು ವಿಕಲಚೇತನ ಮಕ್ಕಳಿಂದ ಸಿನಿಮಾದ ಟೈಟಲ್ ಲಾಂಚ್ ಆಯ್ತು. ಕಾವೇರಿ ಚಿತ್ರಮಂದಿರದಲ್ಲಿ ನಡೆದ ಕಾರ್ಯಕ್ರಮಕ್ಕೆ ನೂರಾರು ಅಭಿಮಾನಿಗಳು ಆಗಮಿಸಿ ಪುನೀತ್ ಹೊಸ ಚಿತ್ರಕ್ಕೆ ಶುಭ ಹಾರೈಸಿದರು. ಕನ್ನಡ ರಾಜ್ಯೋತ್ಸವ ಮತ್ತು ಯುವರತ್ನ ಟೈಟಲ್ ಲಾಂಚ್, ಎರಡನ್ನೂ ಒಟ್ಟಿಗೇ ಸಂಭ್ರಮದಿಂದ ಆಚರಿಸಲಾಯ್ತು.