ನಟಿ ಶೃತಿ ಹರಿಹರನ್, ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರ ಹಿಂದೆ ಪಿತೂರಿ ಇದೆಯಾ..? ಅಂಥಾದ್ದೊಂದು ಆರೋಪ ಮಾಡಿರುವುದು ಅರ್ಜುನ್ ಸರ್ಜಾ ಅವರ ಆಪ್ತರೂ ಆಗಿರುವ ಉದ್ಯಮಿ ಪ್ರಶಾಂತ್ ಸಂಬರಗಿ ಹಾಗೂ ನಿರ್ಮಾಪಕ ಮುನಿರತ್ನ. ಅದು ಪ್ರೇಮ ಬರಹ ಚಿತ್ರದ ವೇಳೆಯಲ್ಲಾದ ಘಟನೆ.
ಅರ್ಜುನ್ ಸರ್ಜಾ ತಮ್ಮ ಪುತ್ರಿ ಐಶ್ವರ್ಯಾರನ್ನು ಪ್ರೇಮ ಬರಹ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಆ ಚಿತ್ರಕ್ಕೆ ಮೊದಲು ನಾಯಕರಾಗಿ ಆಯ್ಕೆಯಾಗಿದ್ದವರು ಆ ದಿನಗಳು ಚೇತನ್. ಆಗ ಚೇತನ್ಗೆ ಅರ್ಜುನ್ ಸರ್ಜಾ 10 ಲಕ್ಷ ಅಡ್ವಾನ್ಸ್ ಕೂಡಾ ಕೊಟ್ಟಿದ್ದರು. ನಂತರ ಬೇರೆ ಬೇರೆ ಕಾರಣಗಳಿಂದಾಗಿ ಚೇತನ್ರನ್ನು ಚಿತ್ರದಿಂದ ಕೈಬಿಟ್ಟಿದ್ದರು. ಹಾಗೆ ಅವಕಾಶ ಕೈ ತಪ್ಪಿದ್ದಕ್ಕೆ ನಿಮಗೆ ತಕ್ಕ ಪಾಠ ಕಲಿಸುವೆ ಎಂದು ಮೆಸೇಜ್ ಮಾಡಿದ್ದರು ಚೇತನ್. ಈಗ ಶೃತಿ ಆರೋಪದ ಹಿಂದೆ ಕೆಲಸ ಮಾಡುತ್ತಿರುವುದು ಪ್ರೇಮ ಬರಹ ಚಿತ್ರದಿಂದ ಕೈ ಬಿಟ್ಟಿದ್ದು ಎಂದಿದ್ದಾರೆ ಪ್ರಶಾಂತ್ ಸಂಬರಗಿ ಹಾಗೂ ಮುನಿರತ್ನ.
ಈ ಬಗ್ಗೆ ಚೇತನ್ ಹೇಳೋದೇ ಬೇರೆ. ಅರ್ಜುನ್ ಸರ್ಜಾ ಅಡ್ವಾನ್ಸ್ ಕೊಟ್ಟಿದ್ದರು ಅನ್ನೋದನ್ನು ಅವರು ಒಪ್ಪಿದ್ದಾರೆ. 10 ಲಕ್ಷ ಅಲ್ಲ, 9 ಲಕ್ಷ ರೂಪಾಯಿ ಅಡ್ವಾನ್ಸ್ ಕೊಟ್ಟಿದ್ದರು. ಅವರು ವಾಪಸ್ ಕೇಳಿಲ್ಲ. ನೋಟಿಸ್ ಕೂಡಾ ಕೊಟ್ಟಿಲ್ಲ. ಶೋಷಣೆಗೊಳಗಾಗುತ್ತಿರುವವರ ಪರ ನಾನಿದ್ದೇನೆ ಎಂದಿದ್ದಾರೆ ಚೇತನ್.
ಸಿನಿಮಾದಿಂದ ಹೊರಬಂದ ಮೇಲೆ, ಅಡ್ವಾನ್ಸ್ ಪಡೆದುಕೊಂಡಿದ್ದ ಹಣವನ್ನು ಕೇಳದೇ ಹೋದರೆ ಕೊಡಬಾರದಾ..? ಏನೋ.. ಪ್ರಶ್ನೆಗಳು ಹಾಗೇ ಉಳಿದುಕೊಂಡಿವೆ.