ರಶ್ಮಿಕಾ ಮಂದಣ್ಣ ಅಂದರೆ ಕಣ್ಣೆದುರು ಬರೋದು ನಗು. ಆ ನಗುಮೊಗದಲ್ಲೇ ಎಲ್ಲವನ್ನೂ ನಿಭಾಯಿಸುವ ಈ ಚೆಲುವೆ ಕಣ್ಣೀರಿಟ್ಟಿದ್ದನ್ನು ನೋಡಿದವರೇ ಇಲ್ಲ ಎನ್ನಬೇಕು. ಇಷ್ಟಕ್ಕೂ ರಶ್ಮಿಕಾ ಮಂದಣ್ಣ ಕಣ್ಣೀರು ಹಾಕಬೇಕೆಂದರೆ ಏನು ಮಾಡಬೇಕು. ಉತ್ತರ ಸಿಂಪಲ್, ಆಕೆಯ ಜೊತೆಯಲ್ಲಿದ್ದವರು ಅರ್ಧ ಗಂಟೆ ಆಕೆಯ ಜೊತೆ ಮಾತನಾಡದೆ ಹೋದರೆ ಸಾಕು. ಅಂಥಾದ್ದೊಂದು ಅನುಭವವನ್ನ ರಶ್ಮಿಕಾ ಅವರೇ ಹೇಳಿಕೊಂಡಿದ್ದಾರೆ.
ಗೀತ ಗೋವಿಂದಂ ಚಿತ್ರದ ಶೂಟಿಂಗ್ ವೇಳೆ ಒಂದು ದಿನ ರಶ್ಮಿಕಾ ಸೆಟ್‍ಗೆ ಹೋದರಂತೆ. ಆದರೆ, ಪ್ರತಿದಿದ ಹೋದ ತಕ್ಷಣ ವಿಶ್ ಮಾಡುತ್ತಿದ್ದವರೆಲ್ಲ ಆ ದಿನ ಫುಲ್ ಸೈಲೆಂಟ್. ಏನೇ ಕೇಳಿದ್ರೂ ಎಲ್ಲರದ್ದೂ ಒನ್ ವರ್ಡ್ ಆನ್ಸರ್. ಎಲ್ಲರ ಮುಖದಲ್ಲೂ ಮೌನ. ಆದರೆ, ಉಳಿದವರ ಜೊತೆ ಅವರೆಲ್ಲ ಆರಾಮಾಗಿಯೇ ಮಾತನಾಡುತ್ತಿದ್ದಾರೆ. ಕನ್‍ಫ್ಯೂಸ್ ಆಗೋಕೆ ಶುರುವಾಯ್ತಂತೆ. ಏನಾದರೂ ತಪ್ಪು ಮಾಡಿಬಿಟ್ಟೆನಾ ಅನ್ನಿಸೋಕೆ ಶುರುವಾಯ್ತಂತೆ. ಕೊನೆಗೆ ಕ್ಯಾರವಾನ್‍ನಲ್ಲಿ ಕುಳಿತು ಕಣ್ಣೀರಿಟ್ಟರಂತೆ. ನಂತರ ಶೂಟಿಂಗ್ ಮಾಡೋಕೆ ಮೂಡ್ ಇಲ್ಲ ಎಂದು ನಿರ್ದೇಶಕರಿಗೆ ಹೇಳಿ ಹೊರಟಾಗ ರಿಯಲ್ ವಿಷಯ ಗೊತ್ತಾಯ್ತಂತೆ.
ರಶ್ಮಿಕಾ ಅವರನ್ನು 15 ನಿಮಿಷ ಯಾರೂ ಮಾತನಾಡಿಸದೆ ಹೋದರೆ ಅತ್ತು ಬಿಡ್ತಾರೆ ಎಂದು ಯಾರೋ ನಿರ್ದೇಶಕ ಪರಶುರಾಮ್‍ಗೆ ಹೇಳೀದ್ರಂತೆ. ಅದನ್ನು ಟೆಸ್ಟ್ ಮಾಡೋಣ ಎಂದು ಇಡೀ ಚಿತ್ರತಂಡ ಪ್ಲಾನ್ ಮಾಡಿಯೇ ರಶ್ಮಿಕಾ ಅವರನ್ನು ಹಾಗೆ ಗೋಳು ಹೊಯ್ದುಕೊಂಡಿತ್ತಂತೆ. ವಿಜಯ್ ದೇವರಕೊಂಡ ಹಾಗೂ ಪರಶುರಾಮ್ ಇಬ್ಬರೂ ಹೇಳಿದರೂ, ರಶ್ಮಿಕಾ ಬಿಕ್ಕಿ ಬಿಕ್ಕಿ ಅಳುತ್ತಿದ್ದರಂತೆ. ಕೊನೆಗೆ ಇಡೀ ಚಿತ್ರತಂಡದವರೆಲ್ಲ ರಶ್ಮಿಕಾ ಬಳಿ ಬಂದು ಸಾರಿ ಕೇಳಿ ಸಮಾಧಾನ ಮಾಡಿದ್ರಂತೆ.