ಸಿನಿಮಾ ಸಾಹಿತ್ಯ ಹಾಳಾಗೋಯ್ತು ಕಣ್ರಿ. ನಮ್ ಕಾಲ ಯೆಂಗಿತ್ತು. ಎಂತೆಂತ ಹಾಡು ಬರ್ತಾ ಇದ್ವು ಎಂದು ನಿಟ್ಟುಸಿರುವ ಬಿಡುವ ವರ್ಗ ಕನ್ನಡದಲ್ಲಿ ಸ್ವಲ್ಪ ದೊಡ್ಡದೇ ಇದೆ. ಕನ್ನಡದಲ್ಲಿ ಸಾಹಿತ್ಯಕ್ಕೇನು ಕೊರತೆ ಎಂದು ಪ್ರಶ್ನಿಸುವವರಿಗೂ ಕೊರತೆಯಿಲ್ಲ. ಅದು ಸತ್ಯವೂ ಹೌದು. ಈಗ.. ಹಾಗೆ ನಿಟ್ಟುಸಿರು ಬಿಡುವವರಿಗೆಲ್ಲ ಉತ್ತರವೆಂಬಂತೆ ಬರುತ್ತಿದೆ ಪಡ್ಡೆಹುಲಿ.
ಸಿನಿಮಾದಲ್ಲಿ ಡಿವಿಜಿ ಅವರ ಬದುಕು ಜಟಕಾ ಬಂಡಿ.. ಕೆಎಸ್ ನರಸಿಂಹ ಸ್ವಾಮಿ ಅವರ ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ.. ಜಿಪಿ ರಾಜರತ್ನಂ ಅವರ ಹೆಂಡ ಹೆಂಡ್ತಿ ಕನ್ನಡ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ.. ಬಿ.ಆರ್.ಲಕ್ಷ್ಮಣ್‍ರಾವ್ ಅವರ ಹೇಳಿ ಹೋಗು ಕಾರಣ.. ಹಾಡುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಚಿತ್ರದ ಹೀರೋ ಶ್ರೇಯಸ್, ಸಿನಿಮಾದಲ್ಲಿ ಗಾಯಕನೂ ಹೌದು. ಅದಕ್ಕಾಗಿ ಈ ಎಲ್ಲ ಭಾವಗೀತೆಗಳೂ ಬಳಕೆಯಾಗಲಿವೆ.
ಕೆ.ಮಂಜು ಪುತ್ರ ಶ್ರೇಯಸ್ ಅಭಿನಯಿಸುತ್ತಿರುವ ಮೊದಲ ಸಿನಿಮಾ. ಗುರುದೇಶಪಾಂಡೆ ನಿರ್ದೇಶನದ ಸಿನಿಮಾಗೆ ಎಂ. ರಮೇಶ್ ರೆಡ್ಡಿ ನಿರ್ಮಾಪಕರು. ಅಮ್ಮ ಐ ಲವ್ ಯು ಖ್ಯಾತಿಯ ನಿಶ್ವಿಕಾ ನಾಯ್ಡು ನಾಯಕಿ. ಚಿತ್ರದಲ್ಲಿ ಸ್ಪೆಷಲ್ಲಾಗಿ ವಿ.ರವಿಚಂದ್ರನ್ ನಟಿಸುತ್ತಿದ್ದಾರೆ.