ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಬ್ರೇಕಪ್ ನ್ಯೂಸ್ ಕುರಿತಂತೆ ರಕ್ಷಿತ್ ಶೆಟ್ಟಿ ಮೌನ ಮುರಿದಿದ್ದಾರೆ. ಅಷ್ಟೇ ಅಲ್ಲ, ತಾವು ದೂರವಾಗಿದ್ದ ಸಾಮಾಜಿಕ ಜಾಲತಾಣಕ್ಕೆ ಮತ್ತೆ ಬಂದಿರುವ ರಕ್ಷಿತ್ ಶೆಟ್ಟಿ, ರಶ್ಮಿಕಾ ಬೆಂಬಲಕ್ಕೆ ನಿಂತಿದ್ದಾರೆ. ನನ್ನ ಪ್ರೀತಿಪಾತ್ರರ ಬಗ್ಗೆ ಹರಿದಾಡುತ್ತಿರುವ ಕೆಲವು ಸಂಗತಿಗಳ ಕುರಿತು ಸ್ಪಷ್ಟನೆ ನೀಡಲು ಮತ್ತೆ ಬಂದಿದ್ದೇನೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ.
ರಶ್ಮಿಕಾ ಬಗ್ಗೆ ರೂಪುಗೊಳ್ಳುತ್ತಿರುವ ಅಭಿಪ್ರಾಯ ಬೇಸರ ತರಿಸಿದೆ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅಂತಾರೆ. ಆದರೆ ಈ ಸುದ್ದಿಗಳನ್ನು ನನ್ನನ್ನಾಗಲೀ ಅಥವಾ ರಶ್ಮಿಕಾ ಅವರನ್ನಾಗಲೀ ಸಂಪರ್ಕಿಸದೆ ಮಾಡಲಾಗಿದೆ. ರಶ್ಮಿಕಾ ನನಗೆ 2 ವರ್ಷಗಳಿಂದ ಚೆನ್ನಾಗಿ ಗೊತ್ತು. ಎಲ್ಲರಿಗಿಂತ ಚೆನ್ನಾಗಿ ಗೊತ್ತು. ದಯವಿಟ್ಟು ಬಜ್ ಮಾಡುವುದನ್ನು ನಿಲ್ಲಿಸಿ. ರಶ್ಮಿಕಾರನ್ನು ನೆಮ್ಮದಿಯಾಗಿರಲು ಬಿಡಿ ಎಂದು ಮನವಿ ಮಾಡಿದ್ದಾರೆ ರಕ್ಷಿತ್ ಶೆಟ್ಟಿ.
ದಯವಿಟ್ಟು ಮಾಧ್ಯಮದ ಸುದ್ದಿಗಳನ್ನು ನಂಬಬೇಡಿ ಎಂದಿರುವ ರಕ್ಷಿತ್ ಶೆಟ್ಟಿ, ಅವೆಲ್ಲವೂ ಕಪೋಲಕಲ್ಪಿತ ಎಂದಿದ್ದಾರೆ. ನಾನು ಸಾಮಾಜಿಕ ಜಾಲತಾಣದಿಂದ ದೂರವಾಗೋಕೆ ಕಾರಣ, ನಾನು ಅದಕ್ಕೆ ಅಡಿಕ್ಟ್ ಆಗಿಬಿಟ್ಟಿದ್ದೆ. ಅದರಿಂದ ಹೊರಬರಬೇಕಿತ್ತು. ಅಷ್ಟೇ ಹೊರತು, ಅದಕ್ಕೂ ರಶ್ಮಿಕಾಗೂ ಸಂಬಂಧ ಕಲ್ಪಿಸಬೇಡಿ ಎಂದು ಕೇಳಿಕೊಂಡಿದ್ದಾರೆ.