ಅಯೋಗ್ಯ. ನೀನಾಸಂ ಸತೀಶ್, ರಚಿತಾ ರಾಮ್, ರವಿಶಂಕರ್ ಅಭಿನಯದ ಸಿನಿಮಾ. ಕಳೆದೊಂದು ವಾರದಿಂದ ಬಾಕ್ಸಾಫೀಸ್‍ನಲ್ಲಿ ಮ್ಯಾಜಿಕ್ ಮಾಡಿರುವ ಅಯೋಗ್ಯ, ಈಗ ಆಂಧ್ರಪ್ರದೇಶಕ್ಕೂ ಕಾಲಿಟ್ಟಿದೆ. ಅದೂ ಅಡೆತಡೆಗಳನ್ನು ದಾಟಿ ಹೈದರಾಬಾದ್‍ನಲ್ಲಿ ತೆರೆ ಕಾಣುತ್ತಿದೆ.
ನಿರ್ಮಾಪಕ ಟಿ.ಆರ್.ಚಂದ್ರಶೇಖರ್, ಸಿನಿಮಾವನ್ನು ಹೈದರಾಬಾದ್‍ನ ಮಲ್ಟಿಪ್ಲೆಕ್ಸ್‍ಗಳಲ್ಲಿ ರಿಲೀಸ್ ಮಾಡೋಕೆ ರೆಡಿಯಾಗಿದ್ದರು. ಆದರೆ, ಅಲ್ಲಿನ ಫಿಲಂ ಚೇಂಬರ್, ಹೈದರಾಬಾದ್‍ನಲ್ಲಿ ಕನ್ನಡ ಸಿನಿಮಾ ಬಿಡುಗಡೆಗೆ ಒಪ್ಪಿಗೆ ಕೊಡಬೇಕಿತ್ತು. ಈ ಹೊಸ ತಕರಾರಿನ ವಿರುದ್ಧ ಚಿತ್ರತಂಡ ಗರಂ ಆಗಿತ್ತು. ಸತೀಶ್, ಬಹಿರಂಗವಾಗಿಯೇ ಆಂಧ್ರಪ್ರದೇಶ ಫಿಲಂಚೇಂಬರ್ ವಿರುದ್ಧ ಸಿಟ್ಟಾಗಿದ್ದರು. ಅವರ ಸಿನಿಮಾಗಳನ್ನು ನಮ್ಮಲ್ಲಿ ಇಷ್ಟಬಂದಂತೆ ಬಿಡುಗಡೆ ಮಾಡ್ತಾರೆ. ಆದರೆ, ನಮ್ಮ ಸಿನಿಮಾಗಳನ್ನು ಅಲ್ಲಿ ಬಿಡುಗಡೆ ಮಾಡೋಕೆ ಇಲ್ಲದ ಷರತ್ತು ಹಾಕ್ತಾರೆ ಎಂದು ಆಕ್ರೋಶಗೊಂಡಿದ್ದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯಪ್ರವೇಶದಿಂದ ವಿವಾದ ಬಗೆಹರಿದಿದ್ದು, ಮುಂದಿನ ವಾರದಿಂದ ಹೈದರಾಬಾದ್ ಮಲ್ಟಿಪ್ಲೆಕ್ಸುಗಳಲ್ಲಿ 6 ಸ್ಕ್ರೀನುಗಳಲ್ಲಿ ಅಯೋಗ್ಯ ಚಿತ್ರ ಪ್ರದರ್ಶನಗೊಳ್ಳಲಿದೆ. ಒಂದು ಯಶಸ್ವಿ ಚಿತ್ರವನ್ನು ಹೊರರಾಜ್ಯದಲ್ಲಿ ಬಿಡುಗಡೆ ಮಾಡೋಕೆ ಎದುರಾಗುವ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ ನಿರ್ದೇಶಕ ಮಹೇಶ್ ಕುಮಾರ್.