ಒಂದು ಅಚ್ಚುಕಟ್ಟಾದ ದೋಷಗಳೇ ಇಲ್ಲದ "ಆ ಕರಾಳ ರಾತ್ರಿ" ಎಂಬ ಚಿತ್ರವನ್ನು ನೋಡಿದೆ. ಈ ಚಿತ್ರ ನೊಡೋಕೆ ನಟ ಜೆ.ಕೆ. ಬಹಳ ದಿನಗಳಿಂದ ನನಗೆ ಒತ್ತಾಯ ಮಾಡ್ತಾ ಇದ್ದ. ಸಮಯದ ಅಭಾವ ನೋಡೋಕೆ ಆಗಿರ್ಲಿಲ್ಲಾ. ಆದರೆ ನಿಜ ಹೇಳ್ತೀನಿ ಸಮಯ ಮಾಡ್ಕೊಂಡು ಸಿನಿಮಾ ನೋಡಿದ್ದಕ್ಕೂ ಸಾರ್ಥಕವಾಯ್ತು. ಯಾಕೆ ಅಂದ್ರೇ ಒಂದು ಚಿಕ್ಕ ಕಥೆಯನ್ನು ಬಹಳ ಪರಿಣಾಮಕಾರಿಯಾಗಿ ತೆರೆಗೆ ತಂದಿರುವ ಚಿತ್ರ ಇದು.
ಒಂದೇ ಜಾಗದಲ್ಲಿ ಕಥೆ ನಡೆದರೂ ಚಿತ್ರಕಥೆ ಮತ್ತು ಪಾತ್ರಗಳು ನಿಮ್ಮನ್ನು ಒಂದು ರೋಮಾಂಚಕಾರಿ ಪ್ರಯಾಣದ ಅನುಭವ ನೀಡುತ್ತದೆ. ಹೌದು ಆ ಪ್ರಯಾಣ ಕುರ್ಚಿಯ ಹಿಂದೆ ಕೂತಿರುವ ನಿಮ್ಮನ್ನು ಕುರ್ಚಿಯ ತುತ್ತ-ತುದಿಗೆ ತಂದು ಕೂರಿಸುವಷ್ಟು ಪರಿಣಾಮಕಾರಿಯಾಗಿದೆ. ಪ್ರತೀ ಕ್ಷಣ ನೀವು ಕಥೆಯ ಒಂದು ಭಾಗವಾಗಿ ನಿಮ್ಮ ಮುಂದೆಯೇ ಕಥೆ ನಡೆಯುತ್ತಿದೆ ಅನ್ನುವಷ್ಟರ ಮಟ್ಟಿಗೆ ನಿಮ್ಮನ್ನು ಒಳಗೆ ಸೆಳೆಯುತ್ತದೆ. ಇದು ಸಾಧ್ಯವಾಗಿದ್ದು ಚಿತ್ರಕಥೆ, ಸಂಭಾಷಣೆ, ಪಾತ್ರಗಳು, ಅಭಿನಯ ಮತ್ತು ತಂತ್ರಜ್ಞರ ಪರಿಪೂರ್ಣ ಶ್ರಮದಿಂದ.
ಪ್ರತಿಯೊಬ್ಬ ಕಲಾವಿದನೂ ಎಲ್ಲಿಯೂ ಅಭಿನಯಿಸಿಲ್ಲ... ಜೀವಿಸಿದ್ದಾರೆ! ತಾವೇ ಪಾತ್ರವಾಗಿ ವಿಜೃಂಭಿಸಿದ್ದಾರೆ. ಯಾವೊಬ್ಬ ಕಲಾವಿದನೂ ವಿನಾಕಾರಣ ತನ್ನ ಅಸ್ತಿತ್ವವನ್ನು ಹೇರಲು ಪ್ರಯತ್ನಿಸಿಲ್ಲ.
ರಂಗಾಯಣ ರಘು... ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದ ಹಾಗೂ ನನ್ನ ನೆಚ್ಚಿನ ಕ್ರಿಯಾಶೀಲ ಕಲಾವಿದ. ತಮ್ಮ ನೈಜ ಅಭಿನಯದಿಂದ ಮತ್ತೊಮ್ಮೆ ಅದನ್ನು ಸಾಬೀತುಪಡಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇವರು ಅತಿದೊಡ್ಡ ಉಡುಗೊರೆ.
ಎಂಥಹ ಪಾತ್ರಗಳೇ ಆದರೂ ಅದನ್ನು ಲೀಲಾಜಾಲವಾಗಿ ಅಭಿನಯಿಸುವ ಕಲಾವಿದೆ ವೀಣಾ ಸುಂದರ್. ಮಾಣಿಕ್ಯ ಚಿತ್ರದಲ್ಲೇ ಒಂದು ಸಣ್ಣ ಪಾತ್ರಕ್ಕೆ ಆಕೆ ಜೀವ ತುಂಬಿದ್ದು ನೋಡಿ ನಾನು ಬೆರಗಾಗಿದ್ದೆ. ನಿಜವಾಗಲೂ ಅತ್ಯುತ್ತಮ ಕಲಾವಿದೆ.
ಅನುಪಮ ತಿಂದು ಬಿಸಾಕಿದ್ದಾರೆ....ಅಬ್ಬಾ....100 ಚಿತ್ರಗಳ ಅನುಭವ ಇರುವ ನಟಿಯಂತೆ ಅಮೋಘ ಅಭಿನಯ ನೀಡಿದ್ದಾರೆ ...ಒಂದು ಕಷ್ಟಕರವಾದ ಪಾತ್ರವನ್ನು ನಾಜೂಕಾಗಿ ನಿಭಾಯಿಸಿದ್ದಾರೆ...ಆಕೆಯ ಪ್ರತಿಭೆಗೆ ಇನ್ನಷ್ಟು ಪ್ರೋತ್ಸಾಹ ಖಂಡಿತವಾಗಲೂ ಸಿಗಲೆ ಬೇಕೂ...ಆಕೆಗೆ ನನ್ನ ಅಭಿನಂದನೆಗಳು
ಜೆ.ಕೆ. ...ನೋಡಿ ನಿಜವಾಗಲೂ ಆಶ್ಚರ್ಯವಾಯಿತು...ಆತ ಮಾಡಿರುವ ಸುಮಾರು ಪತ್ರಗಳನ್ನು ನಾನು ನೋಡಿದ್ದೇನೆ...ಆದರೆ ಇದು ತನ್ನ ವೃತ್ತಿ ಜೀವನದ ಬೆಸ್ಟ್....ಆತನ ನೋಟ ...ದೇಹ....ಪಾತ್ರಕ್ಕೆ ನ್ಯಾಯ ಒದಗಿಸಿದೆ....ಕನ್ನಡಕದಿಂದ ಹಿಡಿದು ಆತ ಹಾಕಿರುವ ಗೋಲ್ಡ್ ಚೆಯ್ನ್ ... ಆತನ ಉಡುಗೆ ....ನನಗೆ ನನ್ನ ನಿರ್ಮಾಪಕ ಮಿತ್ರರೊಬ್ಬರನ್ನು ನೆನಪಿಸಿತು....ಬಹುಷಹ ಈ ಚಿತ್ರಕ್ಕೆ ಅವರ "ಅರ್ಪಣೆ" ಪಾತ್ರಕ್ಕೂ "ಅರ್ಪಿತ" ವಾಗಿದೆ....ಹ ಹ ಹ....
ಆತನ ಪಾತ್ರವು ನಮಗೆ ಕುತೂಹಲ ಮೂಡಿಸಿರುವುದರ ಜೊತೆಗೆ ಥ್ರಿಲ್ ಅನ್ನು ನೀಡುತ್ತದೆ....ಕೊನೆಯ ಹಂತ ತಲುಪುವಷ್ಟರಲ್ಲೀ ಈ ಪಾತ್ರದ ಮೇಲೆ ನಿಮಗೆ ಲವ್ ಆಗಿರುತ್ತದೆ....ಕಮ್ಮರ್ಷಿಯಲ್ ಪಾತ್ರವಲ್ಲದಿದ್ದರೂ ಇಂಥ ಪಾತ್ರ ಒಪ್ಪಿ ನಿಭಯಿಸಿರುವುದಕ್ಕೆ ಜೆ.ಕೆ. ...ಅಭಿನಂದನಾರ್ಹ... ಇನ್ನೂ ಬೆಳೆಯುತ್ತೀರೀ ಜೆ.ಕೆ....
ಒಂದು ಮಾತು ದಯಾಳ್ ಬಗ್ಗೆ...... ಈ ಚಿತ್ರದಲ್ಲಿ ನನಗೆ ಅತಿದೊಡ್ಡ ಆಶ್ಚರ್ಯ ಎಂದರೆ ಅದು ದಯಾಳ್... ನಿರ್ದೇಶನದಲ್ಲಿ ಈ ಬಾರಿ ಈತ ಅತ್ಯುತ್ತಮ. ತಪ್ಪುಗಳು ಕಾಣಿಸುತ್ತೆ ಅಂತಾನೇ "ಮೈಕ್ರೋಸ್ಕೋಪ್ ಝೂಮ್" ಹಾಕಿ ಕುಳಿತೆ, ಆದರೆ ನನ್ನ "ಮೈಕ್ರೊಸ್ಕೋಪ್" ಕಾಣಿಸಲೇ ಇಲ್ಲಾ... ಅಷ್ಟು ಅಚ್ಚುಕಟ್ಟು.
ಶುಭಾಶಯಗಳು ದಯಾಳ್, ಒಬ್ಬ ತಂತ್ರಜ್ಞನಾಗಿ ನಿಮ್ಮ ತಾಂತ್ರಿಕತೆಯ ಮೇಲೆ ನನ್ನ ಗೌರವ ಅಪಾರವಾಗಿ ಇಮ್ಮಡಿಗೊಳಿಸಿದೆ.
ಸಂಗೀತ ನಿರ್ದೇಶಕ ನಾರಾಯಣ್ ಹಿನ್ನೆಲೆ ಸಂಗೀತದ ಮುಖಾಂತರ ಚಿತ್ರ ಮುಕ್ತಾಯಗೊಳ್ಳುವಷ್ಟರಲ್ಲಿ ತಾವೇ ಚಿತ್ರದ ನಾಯಕನಾಗಿ ವಿಜೃಂಭಿಸುತ್ತಾರೆ.
ಪಿ.ಕೆ.ಹೆಚ್. ದಾಸ್ ಅವರ ಬಗ್ಗೆ ನಾನೇನೂ ಹೇಳಬೇಕಿಲ್ಲಾ. ಆತ ಈ ಚಿತ್ರದ ಬಹು ದೊಡ್ಡ ಶಕ್ತಿ. ಚಿಕ್ಕ ಬಡ್ಜೆಟ್ ನಿರ್ಧಿಷ್ಟ ದಿನಗಳು ಒಂದೇ ಲೊಕೇಷನ್ ಆದರೂ ತೆರೆಯ ಮೇಲೆ ಅವರ ಕೈಚಳಕ ಅದ್ಭುತ.
ಸ್ವಲ್ಪವೂ ನಿರೀಕ್ಷೆಯಿಲ್ಲದೇ ಕುಳಿತುಕೊಂಡೆ ಚಿತ್ರ ಮುಗಿದ ಮೇಲೆ ಪರಿಪೂರ್ಣತೆಯ ಭಾವದಿಂದ ಹೊರಗೆ ಬಂದೆ.
ಎಲ್ಲರೂ ಈ ಚಿತ್ರವನ್ನು ನೋಡಿ ನನ್ನ ಅನುಭವವನ್ನು ನಿಮ್ಮ ಅನುಭವವಾಗಿಸಿಕೊಳ್ಳಿ ಎಂದು ಕೇಳಿಕೊಳ್ಳುತ್ತೇನೆ.
ನಿಮಗೆ ಸಂತೃಪ್ತ ಅನುಭವ ಈ ಚಿತ್ರವು ನೀಡುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲಾ.
"ಅಬ್ಭಾ ಎಂಥಹ ಅದ್ಭುತ ಚಿತ್ರ"
ನಿಮ್ಮ ಕಿಚ್ಚ ಸುದೀಪ್