ರಮೇಶ್ ಅರವಿಂದ್ ಅಂದ್ರೆ, ಫ್ಯಾಮಿಲಿ ಸ್ಟಾರ್. ತ್ಯಾಗರಾಜ. ಆ್ಯಕ್ಷನ್ ಓರಿಯಂಟೆಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೂ ಕಡಿಮೆ. ಅಂಥಾದ್ದರಲ್ಲಿ ರಮೇಶ್ ಅರವಿಂದ್, ಖಳನಾಯರಾಗಿ ನಟಿಸೋಕೆ ಓಕೆ ಎಂದಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರದಲ್ಲಿ ರಮೇಶ್ ಅರವಿಂದ್ ವಿಲನ್ ಆಗಿ ನಟಿಸುತ್ತಿದ್ದಾರಂತೆ.
ಚಿತ್ರದಲ್ಲಿ ದರ್ಶನ್ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿರುವುದು ಈಗಾಗಲೇ ಸುದ್ದಿಯಾಗಿತ್ತು. ಈಗ ರಮೇಶ್ ಅರವಿಂದ್ ವಿಲನ್ ಆಗಿ ಇನ್ಸ್‍ಪೆಕ್ಟರ್ ವಿಕ್ರಂ ಟೀಂಗೆ ಎಂಟ್ರಿ ಕೊಟ್ಟಿದ್ದಾರೆ.
ರಮೇಶ್ ಅರವಿಂದ್, ವಿಲನ್ ಆಗಿ ಕಾಣಿಸಿಕೊಂಡಿದ್ದು ಅಮೃತವರ್ಷಿಣಿ ಚಿತ್ರದಲ್ಲಿ ಮಾತ್ರ. ಇನ್ಸ್‍ಪೆಕ್ಟರ್ ವಿಕ್ರಂನಲ್ಲಿ ವಿಲನ್ ಪಾತ್ರ ಹೇಗಿರುತ್ತೆ ಅನ್ನೋದು ಸದ್ಯಕ್ಕೆ ಸೀಕ್ರೆಟ್.
ರಮೇಶ್ ಅರವಿಂದ್, ಕೈತುಂಬಾ ಮೈತುಂಬಾ ಕೆಲಸ ಹಚ್ಚಿಕೊಂಡುಬಿಟ್ಟಿದ್ದಾರೆ. ಒಂದು ಕಡೆ ನಿರ್ದೇಶಕರಾಗಿ ಬಟರ್‍ಫ್ಲೈ ಚಿತ್ರವನ್ನು ಕನ್ನಡ ಮತ್ತು ತಮಿಳಿನಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೊಂದು ಕಡೆ ರಾಧಿಕಾ ಕುಮಾರಸ್ವಾಮಿ ಜೊತೆ ಭೈರಾದೇವಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದು ಕಡೆ ಕನ್ನಡದ ಕೋಟ್ಯಧಿಪತಿ ರಿಯಾಲಿಟಿ ಶೋ ನಿರೂಪಿಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ವಿಲನ್ ಪಾತ್ರಕ್ಕೂ ಓಕೆ ಎಂದಿದ್ದಾರೆ.
ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರದ ನಿರ್ಮಾಪಕರು ಎ.ಆರ್.ವಿಖ್ಯಾತ್. ರಮೇಶ್ ಅರವಿಂದ್ ಅವರ 100ನೇ ಸಿನಿಮಾ ಪುಷ್ಕಕವಿಮಾನ ಚಿತ್ರ ನಿರ್ಮಿಸಿದ್ದವರು. ಆ ಪ್ರೀತಿಯೂ ವಿಲನ್ ಪಾತ್ರ ಒಪ್ಪಿಕೊಳ್ಳೋಕೆ ಕಾರಣವಾಗಿದೆ. ನರಸಿಂಹ ನಿರ್ದೇಶನದ ಚಿತ್ರ, ಈಗಾಗಲೇ ಶೇ.60ರಷ್ಟು ಚಿತ್ರೀಕರಣ ಮುಗಿಸಿದೆ.