ಡಾ.ರಾಜ್ ಕುಮಾರ್ ಅವರ ಮೊಮ್ಮಗ, ರಾಘವೇಂದ್ರ ರಾಜ್‍ಕುಮಾರ್ ಅವರ ಮಗ ಯುವ ರಾಜ್‍ಕುಮಾರ್ ಅವರ ನಿಶ್ಚಿತಾರ್ಥ ಮೈಸೂರಿನಲ್ಲಿ ಮೈಸೂರಿನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಮೈಸೂರಿನ ಯುವತಿ ಶ್ರೀದೇವಿ ಭೈರಪ್ಪ ಮತ್ತು ಯುವರಾಜ್‍ಕುಮಾರ್ ಉಂಗುರ ಬದಲಿಸಿಕೊಂಡಿದ್ದಾರೆ.
ವಿನಯ್ ರಾಜ್‍ಕುಮಾರ್ ಅವರ ರನ್ ಆ್ಯಂಟನಿ ಸಿನಿಮಾದ ಪ್ರಚಾರದಲ್ಲಿ ಕೆಲಸ ಮಾಡಿದ್ದ ಶ್ರೀದೇವಿಗೆ, ಆ ವೇಳೆ ಯುವರಾಜ್‍ಕುಮಾರ್ ಗೆಳೆತನವಾಗಿತ್ತು. ಗೆಳೆತನ ಪ್ರೀತಿಗೆ ತಿರುಗಿತ್ತು. ಯುವನ ಜೊತೆ ರಾಜ್ ಸಿವಿಲ್ ಸರ್ವಿಸ್ (ಐಎಎಸ್ ಓದಲು ಬಯಸುವ ಬಡ ಪ್ರತಿಭಾವಂತರಿಗೆ ಉಚಿತ ಮಾರ್ಗದರ್ಶನ, ನೆರವು ನೀಡುತ್ತಿರುವ ಸಂಸ್ಥೆ) ನೋಡಿಕೊಳ್ಳುತ್ತಿದ್ದಾರೆ ಶ್ರೀದೇವಿ. ಈಗ ಇಬ್ಬರ ಪ್ರೀತಿಗೆ ಹಿರಿಯರ ಆಶೀರ್ವಾದವೂ ಸಿಕ್ಕು, ಸಪ್ತಪದಿ ತುಳಿಯಲು ಸಿದ್ಧವಾಗಿದೆ ಯುವಜೋಡಿ.
ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಸೇರಿದಂತೆ, ರಾಜ್ ಮನೆತನದ ಸದಸ್ಯರೆಲ್ಲ ಹಾಜರಿದ್ದು, ಯುವ ಜೋಡಿಗೆ ಹರಸಿ ಹಾರೈಸಿದರು. ರೆಬಲ್‍ಸ್ಟಾರ್ ಅಂಬರೀಷ್, ಸುಮಲತಾ, ರಾಕ್‍ಲೈನ್ ವೆಂಕಟೇಶ್, ಶ್ರೀಮುರಳಿ ಸೇರಿದಂತೆ ಕುಟುಂಬದ ಆಪ್ತರು ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿದ್ದರು. ಮದುವೆ ಶೀಘ್ರದಲ್ಲೇ ನೆರವೇರಲಿದೆ.