ಈ ಬಾರಿಯ ಬಜೆಟ್ನಲ್ಲಿ ಕನ್ನಡ ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ದೊಡ್ಡದಾಗಿ ಬೆಳೆಯುತ್ತಿರುವ ಚಲನಚಿತ್ರೋದ್ಯಮದಲ್ಲಿ ಚಲನಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚಿತ್ರದ ತಯಾರಿಕೆ, ನಿರ್ದೇಶನ, ಛಾಯಾಚಿತ್ರ, ಧ್ವನಿ, ಸಂಕಲನ ಇತ್ಯಾದಿ ವಿಷಯಗಳಲ್ಲಿ ತರಬೇತಿ ನೀಡಲು ಚಲನಚಿತ್ರ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿದ್ದಾರೆ. ಕುಮಾರಸ್ವಾಮಿಯವರ ಸ್ವಕ್ಷೇತ್ರವೂ ಆಗಿರುವ ರಾಮನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಚಲನಚಿತ್ರ ವಿಶ್ವವಿದ್ಯಾನಿಲಯ ತೆರೆಯಲು 30 ಕೋಟಿ ರೂ. ಬಂಡವಾಳ ಮೀಸಲಿಟ್ಟಿದ್ದಾರೆ.
ಅಷ್ಟೇ ಅಲ್ಲ, ರಾಮನಗರ ಫಿಲಂ ಸಿಟಿಯಲ್ಲಿ ಛಾಯಾಚಿತ್ರ, ಸಂಕಲನ, ಸೌಂಡ್ ರೆರ್ಕಾಡಿಂಗ್ ಮಾಡುವ ಸಂಸ್ಥೆ, ಅನಿಮೇಷನ್ ಸ್ಟುಡಿಯೋಗಳು, ಕಂಪ್ಯೂಟರ್ ಗ್ರಾಫಿಕ್ ಸ್ಟುಡಿಯೋಗಳು ಚಲನಚಿತ್ರ ರಂಗಕ್ಕೆ ಸೇವೆ ಸಲ್ಲಿಸುವ ಉದ್ಯಮಗಳಿಗೆ ಪ್ರೋತ್ಸಾಹ ನೀಡಲು 40 ಕೋಟಿ ರೂ.ಗಳ ಬಂಡವಾಳ ಹೂಡಿಕೆಗೆ ಬಜೆಟ್ನಲ್ಲಿ ಘೋಷಿಸಿದ್ಧಾರೆ.
ಅಲ್ಲದೆ, ಹೊರ ದೇಶದಿಂದ ಚಿತ್ರ ನಿರ್ಮಾಣಕ್ಕಾಗಿ ಬರುವ ಕಲಾವಿದರು ಮುಂತಾದ ತಂತ್ರಜ್ಞರಿಗೆ ವಸತಿ ಹಾಗೂ ಇನ್ನಿತರೆ ಅವಶ್ಯಕ ಮೂಲಭೂತ ಸೌಲಭ್ಯಗಳ ನಿರ್ಮಾಣಕ್ಕಾಗಿ 20 ಕೋಟಿ ರೂ. ನೀಡುವುದಾಗಿ ಬಜೆಟ್ನಲ್ಲಿ ಪ್ರಕಟಿಸಿದ್ದಾರೆ.
ಅಲ್ಲದೆ, ಡಾ. ರಾಜ್ಕುಮಾರ್ ಸ್ಮರಣಾರ್ಥ ಕಂಠೀರವ ಸ್ಟುಡಿಯೋ ಆವರಣದಲ್ಲಿ ಸುಸಜ್ಜಿತವಾದ ಯೋಗ ಕೇಂದ್ರ ಸ್ಥಾಪನೆಗೂ ಸರ್ಕಾರ ಮುಂದಾಗಿದೆ. ಆದರೆ, ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರಕ್ಕೆ ಗರಿಷ್ಟ ಮಿತಿ ನಿಗದಿ ಕುರಿತಂತೆ ಬಜೆಟ್ನಲ್ಲಿ ಪ್ರಸ್ತಾಪವೇನೂ ಆಗಿಲ್ಲ.