` ಅಂಬರೀಷ್ ಬಾರೋ ಅಂದ್ರೆ ಬರ್ಬೇಕ್.. ಅಷ್ಟೆ.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ambi calls darshan on stage
Darshan, Ambareesh Image

ರೆಬಲ್‍ಸ್ಟಾರ್ ಅಂಬರೀಷ್, ಚಿತ್ರರಂಗದಲ್ಲೇ ಆಗಲೀ, ರಾಜಕೀಯದಲ್ಲೇ ಆಗಲಿ, ಮಂತ್ರಿಯೇ ಆಗಿರಲಿ.. ಆಗಿರದೇ ಇರಲಿ.. ಅವರು ಯಾವತ್ತಿಗೂ ಸ್ಟಾರ್. ಅದು ಮತ್ತೊಮ್ಮೆ ಸಾಬೀತಾಗಿದ್ದು, ಫಿಲಂಚೇಂಬರ್‍ನಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವೆ ಜಯಮಾಲಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ. ಅಂಬರೀಷ್ ಅವರ ಒಂದೊಂದೇ ಝಲಕ್‍ಗಳನ್ನು ಸುಮ್ಮನೆ ನೋಡಿ. 

ಸಮಾರಂಭಕ್ಕೆ ಬಂದಿದ್ದ ದರ್ಶನ್, ಸಾಮಾನ್ಯರಂತೆ ವೇದಿಕೆಯ ಕೆಳಗೆ ಕುಳಿತಿದ್ದರು. ಅದು ಅಂಬರೀಷ್ ಕಣ್ಣಿಗೆ ಬಿತ್ತು. ದರ್ಶನ್‍ರನ್ನ ಕರೀರಿ ಅಂದ್ರೂ ದರ್ಶನ್, ನಾನು ಇಲ್ಲೇ ಇರುತ್ತೇನೆ ಎಂದು ಸನ್ನೆ ಮಾಡಿದರು. ಹೇಯ್.. ಎದ್ ಬಾರಯ್ಯ ಎಂದು ಗದರಿಸುತ್ತಿದ್ದಂತೆ, ಮರುಮಾತನಾಡದೆ ವೇದಿಕೆ ಮೇಲಿದ್ದರು ದರ್ಶನ್. ನಂತರವೂ ಅಷ್ಟೆ, ಇಳಿದು ಹೋಗೋಕೆ ಯತ್ನಿಸಿದ ದರ್ಶನ್‍ಗೆ ಹೇಯ್.. ಸುಮ್ನೆ ಕೂತ್ಕೋಬೇಕು ಅಂದ್ರು. ದರ್ಶನ್ ಗಪ್‍ಚುಪ್. ವೇದಿಕೆಯಲ್ಲೇ ಕುಳಿತುಬಿಟ್ರು.

ಸಿಎಂಗೆ ಹೂಗುಚ್ಛ ನೀಡೋಕೆ ನೂಕುನುಗ್ಗಲಾಯ್ತು. ವೇದಿಕೆ ಮೆಲೆಲ್ಲ ಅಯೋಮಯ.  ಸಿಎಂ ಕೂಡಾ ಕಕ್ಕಾಬಿಕ್ಕಿಯಾದರು. ಆಗ ಇಡೀ ವೇದಿಕೆಯನ್ನು ಕ್ಷಣದಲ್ಲಿ ಕಂಟ್ರೋಲ್‍ಗೆ ತಗೊಂಡಿದ್ದು ಅಂಬಿ. ಏಯ್ ಹೋಗ್ರೋ ಸಾಕು, ಇನ್ನೂ ಯಾಕೆ ಇಲ್ಲೇ ನಿಂತಿದ್ದೀಯ.. ಕೆಳಗಡೆ ಹೋಗು.. ಎಂದ ಅಂಬರೀಷ್, ಚಿನ್ನೇಗೌಡರನ್ನು ವಿಶೇಷವಾಗಿ ಕರೆದರು. ಬನ್ನಿ ಚಿನ್ನೇಗೌಡ್ರೇ, ನೀವು ಎಲೆಕ್ಷನ್‍ಗೆ ನಿಂತಿದ್ದೀರ ಅಂತಾ ಗೊತ್ತು, ಬನ್ನಿ.. ಬನ್ನಿ ಎಂದು ವೇದಿಕೆಗೆ ಕರೆದರು. 

ಅಂಬರೀಷ್ ಮಾತನಾಡುವಾಗಲೂ ಅಷ್ಟೆ, ಪಕ್ಕದ ಹಾಲ್‍ನ ಸೌಂಡು ಕಿವಿಗೆ ಬಿದ್ದಾಗ, 

ಯಾವನೋ ಅವ್ನು, ಡೋರ್ ಕ್ಲೋಸ್ ಮಾಡಲೇ ಎಂದಿದ್ದೇ ತಡ, ಡೋರ್ ಕ್ಲೋಸ್ ಆಯ್ತು.

ತಮ್ಮದೇ ಸ್ಟೈಲ್‍ನಲ್ಲಿ ಜಯಮಾಲಾಗೆ ಹಿತವಚನ ಹೇಳಿದ ಅಂಬಿ, ಇಷ್ಟು ದಿನ ರೀಲ್ ನಾಯಕಿ ಆಗಿದ್ದೆ. ಈಗ ರಿಯಲ್ ನಾಯಕಿ ಆಗಿದ್ದೀಯ. ಜನ ಸಾವಿರ ಮಾತಾಡಿಕೊಳ್ಳಲಿ, ತಲೆ ಕೆಡಿಸಿಕೊಳ್ಳಬೇಡ, ಕೆಲಸ ಮಾಡು ಎಂದರು. ಡಾ.ರಾಜ್ ಹಿತವಚನವನ್ನೂ ನೆನಪಿಸಿದ್ರು. 

ರಾಜ್‍ಕುಮಾರ್ ಅವರಿಗೂ ಮೇಕಪ್ ಮಾಡಿಸಿಕೊಳ್ಳುವಾಗ, ಅವಳು ಹಂಗೆ, ಇವರು  ಹಿಂಗೆ ಎನ್ನುತ್ತಿದ್ದರಂತೆ. ಅದೆಲ್ಲವನ್ನೂ ಈ ಕಿವಿಯಲ್ಲಿ ಕೇಳಿ, ಆ ಕಿವಿಯಲ್ಲಿ ಬಿಡುತ್ತಿದ್ದರಂತೆ ರಾಜ್. ನೀನೂ ಹಾಗೆಯೇ ಇರು ಎಂದರು ಅಂಬಿ.

ಅಂಬರೀಷ್ ಗರ್ಜನೆಯನ್ನು ನೋಡುತ್ತಾ ನಗುತ್ತಾ ಕುಳಿತಿದ್ದರು ಮುಖ್ಯಮಂತ್ರಿ ಕುಮಾರಸ್ವಾಮಿ.

#

The Terrorist Movie Gallery

Thayige Thakka Maga Movie Gallery