ಝೀ ಕನ್ನಡದಲ್ಲಿ ಪ್ರಸಾರವಾಗುವ ನಾಗಿಣಿ ಸೀರಿಯಲ್, ಸದ್ಯಕ್ಕೆ ಕನ್ನಡದ ಧಾರಾವಾಹಿಗಳಲ್ಲಿನ ಟಾಪ್ 10 ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ನಾಲಿಗೆಯನ್ನು ಇಷ್ಟುದ್ದ ಚಾಚಿ ಒಳಗೆಳೆದುಕೊಳ್ಳುವ ನಾಗಿಣಿಯನ್ನು ಜನ ಪ್ರೀತಿಯಿಂದ ನೋಡ್ತಾರೆ. ಏಕೆಂದರೆ, ಧಾರಾವಾಹಿಯಲ್ಲಿ ಟಿವಿ ಲೋಕದ ಟಿಆರ್ಪಿ ಸ್ಟಾರ್ ಆಗಿರುವ ಹಾವು, ದೇವರು ಮತ್ತು ಪ್ರೀತಿ, ಕುಟುಂಬ ದ್ವೇಷದ ಕಥೆಯಿದೆ. ಈ ಧಾರಾವಾಹಿಯನ್ನ ರೆಬಲ್ಸ್ಟಾರ್ ಅಂಬರೀಷ್ ತುಂಬಾ ಪ್ರೀತಿಯಿಂದ ನೋಡ್ತಾರಂತೆ.
ರಿಯಾಲಿಟಿ ಏನ್ ಗೊತ್ತಾ..? ತೆರೆಯ ಮೇಲೆ ಹುಲಿ, ಸಿಂಹಗಳ ಜೊತೆಗೆಲ್ಲ ರಿಯಲ್ಲಾಗಿಯೇ ಫೈಟ್ ಮಾಡಿರುವ ಅಂಬರೀಷ್ಗೆ ಹಾವುಗಳೆಂದರೆ ವಿಪರೀತ ಭಯವಂತೆ. ಹಾವಿನ ಹಿಸ್ಸ್ ಅನ್ನೋ ಶಬ್ಧವೆಂದರೆ ಅಂಬಿಗೆ ಅಲರ್ಜಿ.
ನಾಗಿಣಿಯಾಗಿ ನಟಿಸಿರುವ ದೀಪಿಕಾ ದಾಸ್ಗೆ ಒಂದೂವರೆ ವರ್ಷದ ಹಿಂದೆ ಅಂಬರೀಷ್, ನಾಗಿಣಿ ಧಾರಾವಾಹಿಯನ್ನು ಇಷ್ಟಪಡುತ್ತಿರುವುದು ಗೊತ್ತಾಯಿತಂತೆ. ಕಾರ್ಯಕ್ರಮವೊಂದರಲ್ಲಿ ಸಿಕ್ಕಿದ್ದ ಅಂಬರೀಷ್, ಎಲ್ಲಿ.. ಅದೇನೋ ನಾಲಗೆ ತೆಗೀತ್ಯಲ್ಲ.. ಮಾಡು ಆ ತರಾ.. ಎಂದು ಕಿಚಾಯಿಸಿದ್ದರಂತೆ. ಧಾರಾವಾಹಿಯನ್ನು ಅಂಬಿ ಸರ್ ಇಷ್ಟಪಡ್ತಾರೆ ಅನ್ನೋದೇ ನನಗೆ ಸಿಕ್ಕ ಅತಿ ದೊಡ್ಡ ಕಾಣಿಕೆ ಎಂದಿರುವ ದೀಪಿಕಾ ದಾಸ್, ಅಂಬರೀಷ್ ಹುಟ್ಟುಹಬ್ಬದ ವೇಳೆ ಈ ಘಟನೆ ನೆನಪಿಸಿಕೊಂಡಿದ್ದಾರೆ.