ತಾಯಿಯ ಬಗ್ಗೆ, ವಾತ್ಸಲ್ಯದ ಬಗ್ಗೆ ಹಂಸಲೇಖ ಅದ್ಭುತವಾದ ಹಾಡುಗಳನ್ನು ಕೊಟ್ಟಿದ್ದಾರೆ. ಇಂತಹ ಹಂಸಲೇಖ ಅವರ ತಾಯಿ ನಿಜಕ್ಕೂ ಹೇಗಿದ್ದರು..? ಅವರ ತಾಯಿಯ ಶ್ರೇಷ್ಟತೆ ಏನು..? ತಾಯಿಯ ಬಗ್ಗೆ ಅಷ್ಟೆಲ್ಲ ಮಧುರವಾದ ಹಾಡುಗಳನ್ನು ಬರೆಯೋಕೆ ಸ್ಫೂರ್ತಿ ಏನು..? ಇಂತಹ ಪ್ರಶ್ನೆಗಳಿಗೆಲ್ಲ ಹಂಸಲೇಖ ತಮ್ಮದೇ ಜೀವನದ ಕಥೆಯಲ್ಲಿ ಉತ್ತರ ಕೊಟ್ಟಿದ್ದಾರೆ. ಸರಿಗಮಪ ಶೋನ ಜಡ್ಜ್ ಆಗಿರುವ ಹಂಸಲೇಖ, ತಾಯಂದಿರ ದಿನದ ಕಾರ್ಯಕ್ರಮದಲ್ಲಿ ತಮ್ಮ ತಾಯಿಯ ಕಥೆ ಹೇಳಿದ್ದಾರೆ.
ನಾನು ನನ್ನ ತಂದೆ-ತಾಯಿಗೆ 13ನೇ ಮಗ. ನಾನು ಹುಟ್ಟಿದಾಗ 9 ಗ್ರಹಗಳೂ ಕೆಟ್ಟ ಕಾಲದಲ್ಲಿದ್ದವಂತೆ. ಹೀಗಾಗಿ ನನ್ನನ್ನು ಎಲ್ಲರೂ ದೂರ ಇಟ್ಟಿದ್ದರು. ನಾನು ಹುಟ್ಟಿದ ಕೆಲವೇ ತಿಂಗಳಿಗೆ ಸ್ಮಾಲ್‍ಪಾಕ್ಸ್ ಬಂತು. ಅದರಿಂದಾಗಿ ನನ್ನ ದೇಹ ಎಷ್ಟು ಮೃದುವಾಗಿ ಹೋಗಿತ್ತೆಂದರೆ, ನನ್ನ ದೇಹದ ಬಾಯಿ, ಕಿವಿ, ಮೂಗು, ಹಲ್ಲುಗಳನ್ನು ಯಾವ ಕಡೆ ಬೇಕಾದರೂ ತಿರುಗಿಸಿ ಇಡಬಹುದಿತ್ತು. ಆಗ ಎಲ್ಲರೂ ಇದು ಮಗುವಲ್ಲ, ಮಾಂಸದ ಮುದ್ದೆ ಎಂದಿದ್ದರಂತೆ. ಕೆಲಸಕ್ಕೆ ಬರಲ್ಲ ಎಂದಿದ್ದರು.
ಎಲ್ಲರೂ ದೂರ ಮಾಡಿದ್ದ ಮಾಂಸದ ಮುದ್ದೆಗೆ ತಾಯಿಯಲ್ಲದೆ ಇನ್ಯಾರು ಆರೈಕೆ ಮಾಡ್ತಾರೆ ಹೇಳಿ. ನನ್ನ ಅವರ ತಾಯಿ ಆ ಮುದ್ದೆಯನ್ನು 6 ತಿಂಗಳ ಕಾಲ ಸಣ್ಣಕೋಣೆಯೊಂದರಲ್ಲಿಟ್ಟು, ಹಾಲನ್ನು ಹತ್ತಿಯಲ್ಲಿ ನೆನಸಿ ಬಾಯಿಗೆ ಬಿಡುತ್ತಿದ್ದರು. ಎದೆ ಹಾಲು ಸೇವಿಸುವ ಶಕ್ತಿಯೂ ಆ ಮಾಂಸದ ಮುದ್ದೆಗೆ ಇರಲಿಲ್ಲ. ಪ್ರತಿದಿನ ಮೂಗು, ಬಾಯಿಯನ್ನು ಸರಿ ಮಾಡಿ ಮಾಡೀ ತಿದ್ದುತ್ತಿದ್ದರು. ಸತ್ತೇ ಹೋಗಬೇಕಿದ್ದ ಮಗನನ್ನು ಹಾಗೆ ಬದುಕಿಸಿಕೊಂಡರು. ಇದು ಹಂಸಲೇಖ ಅವರ ತಾಯಿಯ ವಾತ್ಸಲ್ಯದ ಕಥೆ.
ಹಂಸಲೇಖಾ ಅವರಿಗೆ ಒಮ್ಮೆ ಪ್ರಸಿದ್ಧ ಸಂಖ್ಯಾಶಾಸ್ತ್ರಜ್ಞರಾದ ಶಕುಂತಲಾ ದೇವಿ ಸಿಕ್ಕಿದ್ದರಂತೆ. ಅವರು ಹಂಸಲೇಖಾಗೆ `ನಿಮ್ಮ ಹುಟ್ಟಿದ ದಿನ, ಸಮಯ ಎಲ್ಲ ನೋಡಿದ್ದೇನೆ. ಅದು ತುಂಬಾ ಕೆಟ್ಟದಾಗಿದೆ. ಸಂಖ್ಯಾಶಾಸ್ತ್ರದ ಪ್ರಕಾರ ನೀವು ಸಾಯಬೇಕಿತ್ತು. ಆದರೆ, ನೀವು ದೊಡ್ಡ ಸ್ಟಾರ್ ಆಗಿದ್ದೀರಾ. ಇದನ್ನೆಲ್ಲ ನೋಡಿ ನಾನು ಏನು ಹೇಳಬೇಕೋ ಗೊತ್ತಾಗುತ್ತಿಲ್ಲ' ಎಂದಿದ್ದರಂತೆ.
ಈಗ ಹೇಳಿ.. ದೇವರು ದೊಡ್ಡವನಾ..? ತಾಯಿ ದೊಡ್ಡವಳಾ..? ದೇವರಿಗಿಂತ ದೊಡ್ಡ ತಾಯಿ ದೇವರ ಆಶೀರ್ವಾದ ಸದಾ ಹಂಸಲೇಖ ಅವರ ಮೇಲಿದೆ ಎನ್ನುವ ಕಾರಣಕ್ಕೇ ಇರಬೇಕು. ಸರಸ್ವತಿ ಅವರಿಗೆ ಒಲಿದುಬಿಟ್ಟಿದ್ದಾಳೆ.