ಕಾವೇರಿ ವಿಚಾರ ಬಂದರೆ ತಮಿಳುನಾಡಿನ ಚಿತ್ರನಟರು ಹದ್ದುಮೀರಿ ಬಿಡುತ್ತಾರೆ. ಕಾವೇರಿಗಾಗಿ ಮಾತನಾಡುವ ಭರದಲ್ಲಿ ಕನ್ನಡಿಗರ ಬಗ್ಗೆಯೂ ಅವಹೇಳನ ಮಾಡೋಕೆ ಹಿಂಜರಿಯುವುದಿಲ್ಲ. ಈ ಹಿಂದೆ ಹಲವು ಬಾರಿ ಅದು ಸಾಬೀತೂ ಆಗಿದೆ. ಈಗ ಕಾವೇರಿ ನದಿ ನೀರು ಹಂಚಿಕೆ ಕುರಿತು ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಒತ್ತಾಯಿಸಿ ತಮಿಳು ಚಿತ್ರರಂಗ ಪ್ರತಿಭಟನೆಗೆ ಕುಳಿತಿದೆ. ರಜಿನಿಕಾಂತ್, ಕಮಲ್ಹಾಸನ್ ಸೇರಿದಂತೆ ಇಡೀ ಚಿತ್ರರಂಗ ಪ್ರತಿಭಟನೆಗಿಳಿದಿರುವಾಗ ತಮಿಳು ನಟ ಸಿಂಬು, ಕನ್ನಡಿಗರ ಪರ ಧ್ವನಿ ಎತ್ತಿದ್ದಾರೆ.
ಕರ್ನಾಟಕದಲ್ಲಿ ಅವರಿಗೇ ನೀರಿಲ್ಲ. ನಮಗೆ ನೀರು ಕೊಡಿ ಎಂದು ಕೇಳೋದು ಹೇಗೆ..? ನೀರಿಗಾಗಿ ನಾವು ನಾವು ಅಣ್ಣತಮ್ಮಂದಿರು ಜಗಳವಾಡಬೇಕಾ..? ನೀರು ಹೆಚ್ಚು ಇದ್ದಿದ್ದರೆ ಕನ್ನಡಿಗರು ಕೊಡಲ್ಲ ಎನ್ನುತ್ತಿದ್ದರಾ..? ಎಂದು ಪ್ರಶ್ನಿಸುವ ಮೂಲಕ, ಒಂದು ದೊಡ್ಡ ಸಮೂಹವನ್ನೇ ಎದುರು ಹಾಕಿಕೊಂಡಿದ್ದಾರೆ.
ನಿಮಗೆ ಸಮಸ್ಯೆ ಬೇಕೋ..? ಪರಿಹಾರ ಬೇಕೊ..? ಇದು ಸಿಂಬು ಎತ್ತಿರುವ ಪ್ರಶ್ನೆ. ಹಲವು ವರ್ಷಗಳಿಂದ ಹೋರಾಡುತ್ತಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಸಮಸ್ಯೆಯ ಮೂಲ ಇದಲ್ಲ ಎನ್ನುವ ಸಿಂಬು, ತಮಿಳು ಮಾಧ್ಯಮಗಳ ಟೀಕೆಯ ಮಧ್ಯೆಯೂ ಬಾಂಧವ್ಯ, ಸಹಬಾಳ್ವೆಯ ಬಗ್ಗೆ ಮಾತನಾಡಿರುವುದು ಕನ್ನಡಿಗರ ಮೆಚ್ಚುಗೆಗೆ ಕಾರಣವಾಗಿದೆ. ತಮಿಳು ಸ್ಟಾರ್ ಆಗಿ, ಇಡೀ ತಮಿಳು ಚಿತ್ರರಂಗವೇ ಕಾವೇರಿಗಾಗಿ ಧ್ವನಿ ಎತ್ತಿರುವಾಗ.. ಸಿಂಬು ಭಿನ್ನವಾಗಿ ಧ್ವನಿಯೆತ್ತುವ ಮೂಲಕ ಕನ್ನಡಿಗರ ಮೆಚ್ಚುಗೆ ಗಿಟ್ಟಿಸಿದ್ದಾರೆ.
ನೀವು ಕುಡಿದು ದಣಿವಾರಿಸಿಕೊಂಡ ಬಳಿಕ ಮಿಕ್ಕ ನೀರನ್ನು ನಮಗೆ ಕೊಡುವಿರಾ..? ಇದು ಕನ್ನಡದ ತಾಯಂದಿರಿಗೆ ನಾನು ಮಾಡುತ್ತಿರುವ ಮನವಿ ಎಂದು ಕೇಳಿರುವ ಸಿಂಬು, ಕನ್ನಡಿಗರ ಹೃದಯ ಗೆದ್ದಿರುವುದು ಸುಳ್ಳಲ್ಲ.