ರಚಿತಾ ರಾಮ್, ಸ್ಯಾಂಡಲ್‍ವುಡ್‍ನ ಡಿಂಪಲ್ ಕ್ವೀನ್. ಪುನೀತ್ ಜೊತೆ ಎರಡನೇ ಬಾರಿ ನಾಯಕಿಯಾಗುತ್ತಿರುವ ಚೆಲುವೆ. ನಟಸಾರ್ವಭೌಮ ಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದ ಪ್ರಿಯಾಂಕಾ ಜಾಗಕ್ಕೆ ಈಗ ರಚಿತಾ ಬಂದಿದ್ದಾರೆ. ನಾಯಕಿಯ ದಿಢೀರ್ ಬದಲಾವಣೆಗೆ ಡೇಟ್ಸ್ ಸಮಸ್ಯೆ ಕಾರಣ ಎಂದಿದ್ದರು ನಿರ್ದೇಶಕ ಪವನ್ ಒಡೆಯರ್. ಆದರೆ, ಈಗ ಅಭಿಮಾನಿಗಳ ಸಮಸ್ಯೆ ಶುರುವಾಗಿದೆ.
ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ #ರಚಿತಾಬೇಡ ಎಂಬ ಅಭಿಯಾನವನ್ನೇ ನಡೆಸಿಬಿಟ್ಟಿದ್ದಾರೆ. ಚಕ್ರವ್ಯೂಹ ಚಿತ್ರದ ಪ್ರೊಮೋಷನ್ ವೇಳೆ, ಇದು ನಿಮ್ಮ ಅಪ್ಪು ಸಿನಿಮಾ, ನಿಮಗೆ ಇಷ್ಟವಾಗುತ್ತೆ ಎಂದು ಹೇಳಿದ್ದರು ರಚಿತಾ. ಹಾಗಾದರೆ, ಇದು ನಿಮ್ಮ ಸಿನಿಮಾ ಅಲ್ವಾ ಎಂದು ರೊಚ್ಚಿಗೆದ್ದಿದ್ದರು ಅಭಿಮಾನಿಗಳು. ಪುನೀತ್ ಮಧ್ಯಪ್ರವೇಶಿಸಿ ಅಭಿಮಾನಿಗಳನ್ನು ಸಮಾಧಾನಪಡಿಸಿದ್ದರು.
ಆ ಘಟನೆಯನ್ನು ಪುನೀತ್ ಮರೆತಿದ್ದರೂ, ಅಭಿಮಾನಿಗಳು ಮರೆತಿಲ್ಲ. ಇನ್ನೂ ಸಿನಿಮಾ ಆರಂಭದ ಹಂತದಲ್ಲಿದೆ. ಈಗಲೇ ಬೇರೆ ನಾಯಕಿಯನ್ನು ಆಯ್ಕೆ ಮಾಡಿ ಎಂದು ನಿರ್ದೇಶಕ ಪವನ್ ಒಡೆಯರ್ ಬೆನ್ನು ಬಿದ್ದಿದ್ದಾರೆ. ಅಭಿಯಾನವನ್ನೇ ಆರಂಭಿಸಿಬಿಟ್ಟಿದ್ದಾರೆ.