ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಶಿವ ಕಾರ್ತಿಕ್ ನಿರ್ದೇಶನದ ಈ ಚಿತ್ರಕ್ಕೆ ಸೂರಪ್ಪ ಬಾಬು ನಿರ್ಮಾಪಕ. ಕಥೆ ಸ್ವತಃ ಸುದೀಪ್ ಅವರದ್ದು.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ವೇಣುಗೋಪಾಲಸ್ವಾಮಿ ದೇಗುಲದಲ್ಲಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಸುದೀಪ್ ಅವರ ಇಡೀ ಕುಟುಂಬವೇ ಭಾಗವಹಿಸಿತ್ತು. ಕ್ಯಾಮೆರಾ ಸ್ವಿಚ್ ಆನ್ ಮಾಡಿದ್ದು ಸುದೀಪ್ ಅವರ ತಂದೆ ಸರೋವರ್ ಸಂಜೀವ್. ಜ್ಯೋತಿ ಬೆಳಗಿದ್ದು ಸುದೀಪ್ ಅವರ ಪತ್ನಿ ಪ್ರಿಯಾ. ಕ್ಲಾಪ್ ಮಾಡಿದ್ದು ನಿರ್ಮಾಪಕ ಮುನಿರತ್ನ.
ರಾಕ್‍ಲೈನ್ ವೆಂಕಟೇಶ್, ಗುರುದತ್, ಸಿ.ಆರ್. ಮನೋಹರ್ ಸೇರಿದಂತೆ ಚಿತ್ರರಂಗದ ಹಲವರು ಭಾಗವಹಿಸಿದ್ದರು. ಚಿತ್ರದ ಚಿತ್ರೀಕರಣ ಮಾರ್ಚ್ ತಿಂಗಳ ಕೊನೆಯಲ್ಲಿ ಶುರುವಾಗಲಿದೆ. ಚೆನ್ನೈ, ಹೈದರಾಬಾದ್‍ನಲ್ಲಿ ಚಿತ್ರೀಕರಣ ನಡೆಯಲಿದೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ, ಕ್ರಿಸ್‍ಮಸ್ ವೇಳೆಗೆ ಕೋಟಿಗೊಬ್ಬ 3 ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾನೆ.