` ಹೇ.. ಕವಿತೆ ನೀನು... ಶ್ರೀದೇವಿ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dream girl sridevi
Sridevi Image captured by KM Veeresh

ಹೇ.. ಕವಿತೆ ನೀನು.. ರಾಗಾ ನಾನು.. ನಾನೂ ನೀನು.. ಒಂದಾಗೆ ಈ ಬಾಳೇ ಪ್ರೇಮಗೀತೆಯಂತೆ.. ಈ ಹಾಡು ಕೇಳಿದ್ದೀರಾ... ಅದು ಪ್ರಿಯಾ ಚಿತ್ರದ ಗೀತೆ. ಆ ಹಾಡಿನ ಮುಂದಿನ ಸಾಲು ನೋಡಿ. ನಿನ್ನ ರೂಪ ಕಂಡು ತಂಗಾಳಿ ಬಂದಿದೆ...ಹೊನ್ನ ಮೈಯ್ಯ ಸೋಕಿ ಆನಂದ ಹೊಂದಿದೆ.. ತನ್ನಾಸೆ ಇನ್ನೂ ತೀರದಾಗಿ.. ಬೀಸಿ ಬೀಸಿ ಬಂದು ಹೋಗಿ.. ಹೇ.. ಕವಿತೆ ನೀನು..

ಆ ಹಾಡಿನಲ್ಲಿ ತಂಗಾಳಿ ಎಷ್ಟು ಬಾರಿ ಸೋಕಿದರೂ ಆಸೆಯೇ ತೀರದಂತೆ ಚೆಲುವೆ ಎಂದು ಚಿ.ಉದಯಶಂಕರ್ ಬಣ್ಣಿಸಿದ್ದುದು ಬೇರ್ಯಾರನ್ನೋ ಅಲ್ಲ..ಶ್ರೀದೇವಿಯನ್ನ. ಶ್ರೀದೇವಿ ಎಂಬ ಅದ್ಭುತ ದೇವಕನ್ನಿಕೆಯನ್ನ ಆ ಹಾಡಿನಲ್ಲಿ ಹೊಗಳುವುದು ರಜಿನಿಕಾಂತ್. ಕೃಷ್ಣ ಸುಂದರ. ಯೇಸುದಾಸ್ ಮತ್ತು ಜಾನಕಿ ಕಂಠದಲ್ಲಿ ಮೂಡಿ ಬಂದಿದ್ದ ಆ ಗೀತೆ ಅಂದಿಗೂ ಮಧುರ. ಎಂದೆಂದಿಗೂ ಮಧುರ. ಆಕೆಯ ಸೌಂದರ್ಯ, ಅಭಿನಯ ಎಂದೆಂದಿಗೂ ಅಮರ.

ಆಕೆಯನ್ನು ಮತ್ತೆ ನೋಡಬೇಕೆಂದೆ ನೀವು ಭಕ್ತ ಕುಂಭಾರ ಚಿತ್ರವನ್ನು ನೆನಪಿಸಿಕೊಳ್ಳಬೇಕು. ಆ ಚಿತ್ರದಲ್ಲಿ ಭಕ್ತ ಜ್ಞಾನದೇವನ ಮೇಲೆ ರೊಟ್ಟಿ ಬೇಯಿಸುವ ಪುಟ್ಟ ಹುಡುಗಿಯಾಗಿ ಕಂಗೊಳಿಸುತ್ತಾರೆ ಶ್ರೀದೇವಿ. ಆಗಿನ್ನೂ ಶ್ರೀದೇವಿಗೆ ಐದೋ ಆರೋ ವರ್ಷ ಇರಬೇಕು.

ನೀವು ನೀ ಬರೆದ ಕಾದಂಬರಿ ಸಿನಿಮಾ ನೋಡಿದ್ದೀರಲ್ಲವೇ.. ಕನ್ನಡದಲ್ಲಿ ಭವ್ಯಾ ಮಾಡಿದ್ದ ಪಾತ್ರವನ್ನು ತಮಿಳಿನಲ್ಲಿ ಮಾಡಿದ್ದವರು ಶ್ರೀದೇವಿ. ಅಪ್ಪಟ ಸೌಂದರ್ಯ ದೇವತೆಯಂತೆ ಆಕೆಯನ್ನು ತೋರಿಸಲು ಒಂದೇ ಒಂದು ಡ್ರೆಸ್‍ಗೆ ಲಕ್ಷಾಂತರ ರೂಪಾಯಿ ಕೊಟ್ಟು ತರಿಸಿದ್ದರಂತೆ ದ್ವಾರಕೀಶ್.

ಆಕೆಯ ಕಣ್ಣಿನಲ್ಲಿ ಅದ್ಭುತವಾದ ಶಕ್ತಿಯಿದೆ. ಕಣ್ಣಿನಲ್ಲೇ ಹೆದರಿಸುತ್ತಿದ್ದ ನಟಿ ಆಕೆ ಎನ್ನುತ್ತಿದ್ದರು ರಾಜ್‍ಕುಮಾರ್. ಶ್ರೀದೇವಿಯನ್ನು ಕನ್ನಡಕ್ಕೆ ಕರೆತರಬೇಕು ಎಂದು ಹಲವು ಬಾರಿ ಪ್ರಯತ್ನಪಟ್ಟವರಲ್ಲಿ ರವಿಚಂದ್ರನ್ ಒಬ್ಬರು. ಆದರೆ, ಆಕೆಗೆ ಸರಿಹೊಂದುವಂತ ಕಥೆ ಸಿಕ್ಕಾಗ ಶ್ರೀದೇವಿ ಸಿಗುತ್ತಿರಲಿಲ್ಲ. ಜೊತೆಗೆ ಶ್ರೀದೇವಿಯ ಆಗಿನ ಕಾಲದ ಸಂಭಾವನೆಯಲ್ಲಿ ಒಂದು ಚಿತ್ರವನ್ನೇ ಮಾಡಿ ಮುಗಿಸಬಹುದಿತ್ತು. ಹೀಗಾಗಿ ಕನಸುಗಾರನ ಕ್ಯಾಮೆರಾಗೆ ಶ್ರೀದೇವಿ ಸಿಗಲೇ ಇಲ್ಲ.

ಆಕೆಯನ್ನು ಹುಚ್ಚರಂತೆ ಆರಾಧಿಸಿದ ಅಭಿಮಾನಿಗಳಲ್ಲಿ ರಾಮ್‍ಗೋಪಾಲ್ ವರ್ಮಾನ ಈ ಒಂದು ಮಾತು ಸಾಕು. ಆಕೆ ಎಂತಹವರೆಂದು ಬಣ್ಣಿಸಲು. ``ಶ್ರೀದೇವಿ ಲಕ್ಷ  ವರ್ಷಗಳಿಗೊಮ್ಮೆ ಜನಿಸಬಹುದಾದ ಅದ್ಭುತ. ಬ್ರಹ್ಮದೇವನ ವಿಶೇಷ ಸೌಂದರ್ಯ ಸೃಷ್ಟಿಯ ಶಿಲ್ಪ ಶ್ರೀದೇವಿ. ಆಕೆಯನ್ನು ಪಡೆಯುವ ಅರ್ಹತೆ, ಬೋನಿಕಪೂರ್‍ಗೆ ಇರಲಿಲ್ಲ. ಹಾಗೆ ನೋಡಿದರೆ, ನನ್ನನ್ನೂ ಸೇರಿದಂತೆ ಜಗತ್ತಿನ ಯಾವ ಪುರುಷನಿಗೂ ಆಕೆಯನ್ನು ಪಡೆಯುವ ಅರ್ಹತೆ ಇರಲಿಲ್ಲ. ಆಕೆ ಬೆಳಕಿನ ರೇಖೆ.. ಆಕೆಯನ್ನು ಬೆಳಕಿನ ಅರಮನೆಯಲ್ಲಿಟ್ಟು ಆರಾಧಿಸಬೇಕು...''

ವರ್ಮಾನ ಕನಸುಗಳು, ಬಣ್ಣನೆಗಳು ಹೀಗೆಯೇ ಮುಂದುವರೆಯುತ್ತವೆ. ಅಭಿಮಾನಿಗಳ ಕನವರಿಕೆಗಳೂ ಅಷ್ಟೆ..ಕವಿತೆಯಂತೆ... ಹೌದು.. ಶ್ರೀದೇವಿ.. ಒಂದು ಅದ್ಭುತ ಕವಿತೆ. ಅಂದಹಾಗೆ ಆಕೆಯ ಮೊದಲು ಹೆಸರು ಶ್ರೀಅಮ್ಮಯ್ಯಾಂಗಾರ್ ಅಯ್ಯಪ್ಪನ್ ಅಂತೆ. ಆಕೆ ತನ್ನ ಸೌಂದರ್ಯಕ್ಕೆ ತಕ್ಕಂತೆಯೇ ಶ್ರೀದೇವಿ ಎಂದು ಬದಲಿಸಿಕೊಂಡುಬಿಟ್ಟರು. ಶ್ರೀದೇವಿ ಎಂದರೆ ಮಹಾಲಕ್ಷ್ಮಿ. ಸಿರಿಯ ದೇವತೆ ಎಂದರ್ಥ. ಈಗ ಭಾರತೀಯ ಚಿತ್ರರಂಗದ ಸೌಂದರ್ಯ ಸಿರಿಯೂ ಇಲ್ಲ. ಸೌಂದರ್ಯ ದೇವಿಯೂ ಇಲ್ಲ.