ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣದ ಕೆಜಿಎಫ್ ಚಿತ್ರ, ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಸುಮಾರು ಒಂದು ವರ್ಷದಿಂದ ಕನ್ನಡಿಗರು ಎದುರು ನೋಡುತ್ತಿರುವ ಚಿತ್ರ. ಚಿತ್ರದ ಚಿತ್ರೀಕರಣ ಇನ್ನೂ ಶೇ.15ರಷ್ಟು ಬಾಕಿಯಿದೆ. ಇದುವರೆಗೆ ಹೊರಬಂದಿರೋದು ಎರಡು ಟೀಸರ್ ಮಾತ್ರ. ಅವು ಹುಟ್ಟಿಸಿರುವ ಕುತೂಹಲ ಸಣ್ಣದೇನಲ್ಲ. ಇಷ್ಟಕ್ಕೂ ಚಿತ್ರದಲ್ಲಿ ಅಂಥಾದ್ದೇನಿದೆ..? ಕಥೆ ಎಂಥಾದ್ದು..? ನಿರ್ದೇಶಕ ಉಗ್ರಂ ಪ್ರಶಾಂತ್ ನೀಲ್, ಒಂದಿಷ್ಟು ಹೇಳಿಕೊಂಡಿದ್ದಾರೆ.
ಇದು 70ರಿಂದ 80ರ ದಶಕದಲ್ಲಿ ನಡೆಯುವ ಕಥೆ. ಅಂಡರ್‍ವಲ್ರ್ಡ್ ಛಾಯೆಯಿರುವುದು ಹೌದಾದರೂ, ಅದಕ್ಕೂ ಕೆಜೆಎಫ್‍ಗೂ ಸಂಬಂಧವಿಲ್ಲ. ಪಾತ್ರಗಳು ನನ್ನ ಕಲ್ಪನೆಯವೇ ಹೊರತು, ನಿಜವಾದ ವ್ಯಕ್ತಿಗೆ ಸಂಬಂಧಪಟ್ಟಿದ್ದಲ್ಲ. ಚಿತ್ರದಲ್ಲಿ ಆ್ಯಕ್ಷನ್, ರೊಮ್ಯಾನ್ಸ್, ತಾಯಿ-ಮಗನ ಸೆಂಟಿಮೆಂಟ್ ಎಲ್ಲವೂ ಇದೆ. ಉಗ್ರಂ ಚಿತ್ರಕ್ಕೂ, ಈ ಚಿತ್ರಕ್ಕೂ ಕೂದಲೆಳೆಯಷ್ಟೂ ಲಿಂಕ್ ಇಲ್ಲ. ಇದು ಕಥೆಯ ಬಗ್ಗೆ ಪ್ರಶಾಂತ್ ಹೇಳಿರುವ ಮಾತು.
ಇನ್ನು ಚಿತ್ರ ರಿಲೀಸ್ ಆಗುವುದು ಏಪ್ರಿಲ್, ಮೇ ನಂತರಾನೇ ಎಂದಿದ್ದಾರೆ ಪ್ರಶಾಂತ್. ನಿರ್ಮಾಪಕ ವಿಜಯ್ ಕಿರಗಂದೂರು ಅವರ ನಿರೀಕ್ಷೆಯಂತೆಯೇ ಚಿತ್ರ ಮೂಡಿ ಬರುತ್ತಿದೆ. ಮೇಕಿಂಗ್ ಶೈಲಿ ಹಾಲಿವುಡ್ ಮಾದರಿಯಲ್ಲಿದೆ ಎಂದು ಖುಷಿಗೊಂಡಿದ್ದಾರೆ.
ಯಶ್ ಅವರಂತೂ ಇಡೀ ಚಿತ್ರವನ್ನು ತಮ್ಮದೇ ಹೋಮ್ ಬ್ಯಾನರ್ ಸಿನಿಮಾವೇನೋ ಎಂಬಷ್ಟು ಪ್ರೀತಿಸುತ್ತಿದ್ದಾರೆ. ತಾವೊಬ್ಬ ಸ್ಟಾರ್ ನಟ ಅನ್ನೋದನ್ನು ಪಕ್ಕಕ್ಕಿಟ್ಟು, ಚಿತ್ರದ ಚಿತ್ರೀಕರಣದಲ್ಲಿ ಇನ್‍ವಾಲ್ವ್ ಆಗುತ್ತಿದ್ದಾರೆ. ಅನಂತ್‍ನಾಗ್, ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ನಾಜರ್ ಕೂಡಾ ಅಷ್ಟೆ.. ಪ್ರತಿಯೊಬ್ಬರೂ ಸಿನಿಮಾವನ್ನು ನಮ್ಮ ಸಿನಿಮಾ ಎಂದೇ ಸಹಕಾರ ನೀಡುತ್ತಿದ್ದಾರೆ. ಒಂದು ಅದ್ಬುತ ಅನುಭವದ ಚಿತ್ರವಂತೂ ನಿಮ್ಮ ಮುಂದೆ ಬರಲಿದೆ ಎಂದು ಭರವಸೆ ನೀಡಿದ್ದಾರೆ ಪ್ರಶಾಂತ್.