ಎ. ಕನ್ನಡ ಚಿತ್ರರಂಗವನ್ನಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗ ಧುತ್ತನೆ ಕನ್ನಡ ಚಿತ್ರಗಳತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಕಥೆ, ಚಿತ್ರಕಥೆಯನ್ನು ಹೀಗೂ ಮಾಡಬಹುದಾ ಎಂದು ಎಲ್ಲರನ್ನೂ ಬೆರಗಾಗಿಸಿದ್ದ ಚಿತ್ರ. ಆ ಚಿತ್ರದ ಹಿಂದಿದ್ದವರು ಉಪೇಂದ್ರ. ಕೇವಲ ಕಥೆ, ಚಿತ್ರಕಥೆಯಷ್ಟೇ ಅಲ್ಲ, ಆ ಚಿತ್ರದ ಹಾಡುಗಳೂ ವಿಭಿನ್ನತೆಯಲ್ಲಿ ಅದ್ದಿ ತೆಗೆದ ಹಾಗಿದ್ದವು. ಅಂತಹ ವಿಭಿನ್ನ ಹಾಡುಗಳನ್ನು ಸೃಷ್ಟಿಸಿದ ಮಾಂತ್ರಿಕ ಗುರುಕಿರಣ್. ಅಂದಹಾಗೆ ಗುರುಕಿರಣ್ ಸಿನಿಮಾ ಜರ್ನಿಗೀಗ 20ರ ಹರೆಯ. ತಮ್ಮ 20 ವರ್ಷದ ಸಿನಿಮಾ ಪ್ರಯಾಣದ ಬಗ್ಗೆ ಗುರುಕಿರಣ್ ಹೇಳಿಕೊಂಡಿರುವ ಕಥೆಗಳೂ ಕೂಡಾ ಅವರ ಸಂಗೀತದಷ್ಟೇ ವಿಭಿನ್ನ.
ಗುರುಕಿರಣ್ ಸಂಗೀತ ನಿರ್ದೇಶಕರಷ್ಟೇ ಅಲ್ಲ, ಹಾಡುಗಳನ್ನೂ ಬರೆದಿದ್ದಾರೆ. ಉಪೇಂದ್ರ ಚಿತ್ರದಲ್ಲಿನ ಟು ಥೌಸೆಂಡ್ ಹಾಡು ಅವರು ಬರೆದ ಮೊದಲ ಗೀತೆ. ಬಂಡಲ್ ಬಡಾಯಿ ಮಾದೇವ, ಈ ಹುಡ್ಗೀರೆಲ್ಲ ಹಿಂಗೆ.. ಮೊದಲಾದ ಟಪ್ಪಾಂಗುಚ್ಚಿ ಹಾಡುಗಳ ಸಾಹಿತ್ಯ ಅವರದ್ದೇ. ಗುರುಕಿರಣ್, ತಮ್ಮ ಕನಸಿನಂತೆಯೇ ತಾವು ಇಷ್ಟಪಡುವ ಹಾಡುಗಳಿಗೆ ತಾವೇ ಧ್ವನಿಯಾದರು. ಗಾಯಕರಾಗುವ ಆಸೆ ಈಡೇರಿಸಿಕೊಂಡರು.
ಈ 20 ವರ್ಷಗಳ ಜರ್ನಿಯಲ್ಲಿ ಎ, ಉಪೇಂದ್ರ, ಅಪ್ಪು, ಆಪ್ತಮಿತ್ರ, ಜೋಗಿ, ನಿನಗಾಗಿ, ಖುಷಿ, ಅಭಿ, ಕರಿಯ, ರಾಮಶಾಮಭಾಮ, ಗಂಡುಗಲಿ ಕುಮಾರರಾಮ.. ಹೀಗೆ ಅವರು ಸಂಗೀತ ನೀಡಿದ ಹಿಟ್ ಚಿತ್ರಗಳ ಸಂಖ್ಯೆ ತುಂಬಾ ದೊಡ್ಡದಿದೆ.
ಗುರುಕಿರಣ್ ಚಿತ್ರರಂಗಕ್ಕೆ ಬಂದದ್ದು ಗಾಯಕನಾಗುವ ಹಂಬಲದಿಂದಲೇ ಹೊರತು, ಬೇರ್ಯಾವ ಉದ್ದೇಶವೂ ಇರಲಿಲ್ಲ. ಆದರೆ, ಅವರ ಧ್ವನಿ ಮತ್ತು ಹಾಡುವ ಶೈಲಿ ಅಂದಿನ ಸಂಗೀತದ ಸ್ಟೈಲ್ಗೆ ಹೊಂದಿಕೆಯಾಗುತ್ತಿರಲಿಲ್ಲ. ತಾನು ಇಷ್ಟಪಡುವ ಹಾಡುಗಳನ್ನು ಹಾಡುವ ಸಲುವಾಗಿಯೇ ಸಂಗೀತ ನಿರ್ದೇಶಕರಾದವರು ಗುರುಕಿರಣ್.
ಗಾಯಕರಾಗಲೆಂದು ಬಂದ ಗುರುಕಿರಣ್, ಗಾಯಕನಾಗುವ ಬದಲು ನಟರಾದರು. ಅವರಿಗೆ ನಟನೆಯ ಅವಕಾಶ ನೀಡಿದ್ದು ನಾಗಾಭರಣ.
ತಾವು ಆರಂಭದಲ್ಲಿ ಪಟ್ಟ ಕಷ್ಟಗಳನ್ನು ನೋವು ಎಂದುಕೊಳ್ಳದ ಸಾಧಕ ಗುರುಕಿರಣ್. ಅವುಗಳನ್ನೆಲ್ಲ ಅನುಭವ ಎಂದೇ ಕರೆದುಕೊಳ್ತಾರೆ. ಆ ಅನುಭವ ಕಲಿಸಿದ ಪಾಠದಿಂದಲೇ ಅವರು ಚಿತ್ರರಂಗಕ್ಕೆ 10ಕ್ಕೂ ಹೆಚ್ಚು ಗೀತಸಾಹಿತಿಗಳನ್ನು, 100ಕ್ಕೂ ಹೆಚ್ಚು ಗಾಯಕರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.
ಗುರುಕಿರಣ್ ಅವರಿಗೆ ಚಿತ್ರಸಂಗೀತದ ಮೊದಲ ಗುರು ವಿ.ಮನೋಹರ್. ಮೊದಲು ಪಡೆದ ಸಂಭಾವನೆ 500 ರೂ.
ಎ ಚಿತ್ರಕ್ಕೆ ಸಂಗೀತ ನೀಡಿದ ಗುರುಕಿರಣ್ಗೆ ಮೊದಲು ಸಿಕ್ಕಿದ್ದ ಪ್ರತಿಕ್ರಿಯೆ ಎಂಥದ್ದು ಗೊತ್ತಾ..? ಎ ಅಂತಾ ಹೆಸರಿಟ್ಟಿದ್ದಾರೆ. ಯಾರು ಕೇಳ್ತಾರೆ ಅನ್ನುತ್ತಿದ್ದವರೇ, ಡ್ಯಾಶ್ ನನ್ ಮಗ ಏನ್ ಹೊಡ್ದವನೇ ಸಾರ್ ಅಂದಿದ್ದರು.
ಗೆಲುವು, ಸೋಲು ಎರಡನ್ನೂ ನೋಡಿರುವ ಗುರುಕಿರಣ್ಗೆ ಇವತ್ತಿಗೂ ಸ್ಫೂರ್ತಿ ಸಿಗುವುದು ಅಭಿಮಾನಿಗಳ ಪ್ರೀತಿಯಿಂದ.