ಕೆ.ಮಂಜು, ಕನ್ನಡದ ಹೆಸರಾಂತ ನಿರ್ಮಾಪಕ. 40ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿರುವ ಮಂಜು, ಹತ್ತಾರು ಹಿಟ್ ಚಿತ್ರಗಳನ್ನು ಕೊಟ್ಟಿರುವ ಸಾಧಕ. ಈಗ ಅವರ ಮಗ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದ ಹೆಸರು ಪಡ್ಡೆಹುಲಿ.
ಪಡ್ಡೆಹುಲಿ ಎಂದ ಕೂಡಲೇ ನಿಮಗೆ ರಾಜಾಹುಲಿ ನೆನಪಾಗಿರಬೇಕಲ್ಲ. ಹೌದು, ಈ ಪಡ್ಡೆಹುಲಿಯ ನಿರ್ದೇಶಕ ರಾಜಾಹುಲಿ ಖ್ಯಾತಿಯ ಗುರುದೇಶಪಾಂಡೆ. ರವಿಚಂದ್ರನ್ ಅವರ ಪ್ರೇಮಲೋಕವನ್ನು ಈ ಜನರೇಷನ್ ಹುಡುಗನ ಮೂಲಕ ಹೇಗೆ ನೋಡೋಕೆ ಸಾಧ್ಯ ಅನ್ನೋ ಕುತೂಹಲಕ್ಕೆ ಈ ಚಿತ್ರದಲ್ಲಿ ಉತ್ತರವಿದೆಯಂತೆ. ಇದೊಂದು ಪಕ್ಕಾ ಯೂತ್‍ಫುಲ್ ಸಬ್ಜೆಕ್ಟ್. ಒಬ್ಬ ಹೊಸ ಹೀರೋನ ಮಾಸ್ ಎಂಟ್ರಿಗೆ ಬೇಕಾದ ಎಲ್ಲ ಅಂಶಗಳೂ ಚಿತ್ರದಲ್ಲಿರುತ್ತವೆ ಎಂದಿದ್ದಾರೆ ನಿರ್ದೇಶಕ ಗುರುದೇಶಪಾಂಡೆ.
ನನ್ನ ಮಗನ ಲಾಂಚಿಂಗ್ ಚಿತ್ರ ಬೇರೊಬ್ಬ ನಿರ್ಮಾಪಕನ ಮೂಲಕ ಆಗುತ್ತಿದೆ ಎನ್ನುವುದೇ ದೊಡ್ಡ ಖುಷಿ ಎಂದಿದ್ದಾರೆ ಕೆ.ಮಂಜು. ಚಿತ್ರಕ್ಕೆ ಕನ್ನಡದ ಹುಡುಗಿಯನ್ನೇ ನಾಯಕಿಯನ್ನಾಗಿ ಮಾಡಿಕೊಳ್ಳಲು ಹುಡುಕಾಟ ನಡೆಯುತ್ತಿದೆ. ಹೊಸ ಪ್ರತಿಭೆಯನ್ನೇ ಆಯ್ಕೆ ಮಾಡಿಕೊಳ್ಳಲು ಗುರು ದೇಶಪಾಂಡೆ ನಿರ್ಧರಿಸಿದ್ದಾರೆ.
ನಿರೀಕ್ಷೆಗಳನ್ನು ಹುಸಿಗೊಳಿಸೋದಿಲ್ಲ. ಎಲ್ಲರ ಕುತೂಹಲಗಳಿಗೆ ಅಭಿನಯದ ಮೂಲಕ ಉತ್ತರ ಕೊಡುತ್ತೇನೆ ಎನ್ನುವುದು ಶ್ರೇಯಸ್ ಆತ್ಮವಿಶ್ವಾಸದ ಭರವಸೆ. ಚಿತ್ರಕ್ಕೆ ನಾಯಕಿಯೊಬ್ಬಳನ್ನು ಬಿಟ್ಟು ಮಿಕ್ಕಿದ್ದೆಲ್ಲವೂ ಫೈನಲ್ ಆಗಿದೆ. ಮುಂದಿನ ತಿಂಗಳು ಚಿತ್ರ ಶುರುವಾಗಲಿದೆ.