ಹೊಂಬಾಳೆ ಬ್ಯಾನರ್‍ನಲ್ಲಿ ಸಿದ್ಧವಾಗುತ್ತಿರುವ ಕೆಜಿಎಫ್ ಚಿತ್ರದ ಕಥೆ ಏನು..? ಯಶ್ ಪಾತ್ರ ಏನು..? ಈ ಬಗ್ಗೆ ಚಿತ್ರತಂಡ ಅದೆಷ್ಟು ಗಮನ ಹರಿಸಿದೆಯೆಂದರೆ, ಒಂದೇ ಒಂದು ಗುಟ್ಟನ್ನೂ ಅದು ಹೊರಬಿಟ್ಟಿಲ್ಲ. ಯಶ್ ಹುಟ್ಟುಹಬ್ಬದಂದು ಬಿಡುಗಡೆಯಾಗಿರುವ ಟೀಸರ್, ಕುತೂಹಲ ಹೆಚ್ಚಿಸಿದೆಯೇ ಹೊರತು, ಕಥೆಯ ಸುಳಿವನ್ನೂ ಹೇಳಿಲ್ಲ.
ಹೀಗೆ ಪ್ರಶಾಂತ್ ನೀಲ್ ಕಥೆಯ ಬಗ್ಗೆ ಗುಟ್ಟು ಕಾಪಾಡಿಕೊಳ್ಳುತ್ತಿರುವ ಹೊತ್ತಿನಲ್ಲಿಯೇ ನಾಯಕ ನಟಿ ಶ್ರೀನಿಧಿ ಶೆಟ್ಟಿ ಮಾತನಾಡಿದ್ದಾರೆ. ಯಶ್ ಬಗ್ಗೆ, ಸಿನಿಮಾ ಟೀಂ ಬಗ್ಗೆ ಖುಷಿ ಖುಷಿಯಾಗಿ ಹೇಳಿಕೊಂಡಿರುವ ಶ್ರೀನಿಧಿ, ನಿಮ್ಮ ರೋಲ್ ಏನು ಎಂದರೆ, ಅದನ್ನೆಲ್ಲ ಹೇಳಂಗಿಲ್ಲ. ನನ್ನ ಪಾತ್ರದ ವಿವರಣೆ ನೀಡಿದರೆ, ಕಥೆ ಗೊತ್ತಾಗಿಬಿಡುತ್ತೆ ಎನ್ನುತ್ತಾರೆ. ಸೀಕ್ರೆಟ್..ಸೀಕ್ರೆಟ್..ಸೀಕ್ರೆಟ್.
ಕಾಲೇಜು ದಿನಗಳಿಂದ ಯಶ್ ಅವರ ಸಿನಿಮಾ ನೋಡುತ್ತಿದ್ದ ಶ್ರೀನಿಧಿಗೆ ಅವರಿಗೇ ಹೀರೋಯಿನ್ ಆಗುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. ನಟನೆಯ ಗಾಳಿಗಂಧ ಗೊತ್ತಿಲ್ಲದ ಶ್ರೀನಿಧಿಗೆ ಸೆಟ್‍ನಲ್ಲಿ ಆ್ಯಕ್ಟಿಂಗ್ ಹೇಳಿಕೊಟ್ಟಿದ್ದು ಸ್ವತಃ ಯಶ್. ಯಶ್ ಅವರಿಲ್ಲದೆ ಹೋಗಿದ್ದರೆ, ನಾನು ಸಿನಿಮಾದಲ್ಲಿ ಅಭಿನಯಿಸಲು ಸಾಧ್ಯವೇ ಆಗುತ್ತಿರಲಿಲ್ಲ ಎಂದಿದ್ದಾರೆ ಶ್ರೀನಿಧಿ.
ಮಿಸ್ ಸುಪ್ರಾ ನ್ಯಾಷನಲ್ ಆಗಿ ಆಯ್ಕೆಯಾಗಿದ್ದ ಶ್ರೀನಿಧಿ ಶೆಟ್ಟಿಗೆ ಆ್ಯಕ್ಟಿಂಗ್ ಕ್ಲಾಸ್‍ಗೆ ಹೋಗುವ ಆಸೆಯಿತ್ತು. ಆದರೆ, ಸಮಯವೇ ಸಿಗಲಿಲ್ಲ. ಈ ಸಿನಿಮಾ ಮುಗಿದ ಮೇಲೆ ಬಿಡುವು ಮಾಡಿಕೊಂಡು ಕಲಿಯುತ್ತೇನೆ ಎಂದಿದ್ದಾರೆ ಶ್ರೀನಿಧಿ.