ಗಣೇಶ್‍ರ ಹೊಸ ಮ್ಯಾನರಿಸಂ, ರಶ್ಮಿಕಾ ಅವರ ಮುಗ್ದತೆ, ಎದೆಯೊಳಕ್ಕೇ ಕಚಗುಳಿ ಇಡುವ ಸಂಭಾಷಣೆ, ಕಲ್ಪನೆಗೆ ಸಾವಿರ ರೂಪ ಕಟ್ಟಿಕೊಡುವ ತುಂಟಾಟದ ಸನ್ನಿವೇಶ.. ಇವೆಲ್ಲವನ್ನೂ ಸೃಷ್ಟಿಸಿರುವ ಕಚಗುಳಿಗೆ ನಾಳೆ ಬಿಡುಗಡೆ ಭಾಗ್ಯ.
ಕಿರಿಕ್ ಪಾರ್ಟಿ ರಶ್ಮಿಕಾ ಮಂದಣ್ಣ ಅವರಿಗೆ ಇದು 3ನೇ ಸಿನಿಮಾ. ಕಳೆದ ವಾರವಷ್ಟೇ ಅವರ 2ನೇ ಸಿನಿಮಾ ಅಂಜನೀಪುತ್ರ ರಿಲೀಸ್ ಆಗಿದೆ. ಅದು ಥಿಯೇಟರ್‍ನಲ್ಲಿ ಅಬ್ಬರಿಸುತ್ತಿರುವಾಗಲೇ, ಚಮಕ್ ನಗೆಯ ಅಲೆಯೆಬ್ಬಿಸಲು ಬರುತ್ತಿದೆ.
ಗಣೇಶ್‍ಗೆ ಇದು ಮತ್ತೆ ಮತ್ತೆ ಮುಂಗಾರು ಮಳೆ ನೆನಪಿಸುತ್ತಿದ್ದರೆ, ಅದಕ್ಕೆ ಕಾರಣ, ಚಿತ್ರ ರಿಲೀಸ್ ಆಗುತ್ತಿರುವ ಡೇಟು. ಇದರ ಹಿಂದೆ ಯಾವುದೇ ಮೂಢನಂಬಿಕೆ ಇಲ್ಲ ಎನ್ನುವ ಗಣೇಶ್, ಡಿಸೆಂಬರ್‍ನಲ್ಲಿ ರಿಲೀಸ್ ಆದ ತಮ್ಮ ಚಿತ್ರಗಳೆಲ್ಲವೂ ಹಿಟ್ ಆಗಿವೆ ಎಂದು ಮುಗುಳ್ನಗುತ್ತಾರೆ.
ಕಾಮಿಡಿ ಕಾಮಿಡಿಯಾಗಿಯೇ ಸೆಂಟಿಮೆಂಟ್ ಹರಿಸುವ ಸುನಿ, ಚಿತ್ರದಲ್ಲಿ ಹಲವು ವಿಶೇಷಗಳನ್ನೂ ಕೊಟ್ಟಿದ್ದಾರಂತೆ. ಸಂದೇಶವೂ ಇದೆಯಂತೆ. ಮನರಂಜನೆಗೆ ಮೋಸವಿಲ್ಲ ಎನ್ನುವ ಸುನಿ ಮಾತನ್ನು ನಂಬಬಹುದು.