ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನಿಪುತ್ರ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಕಳೆದ ಕೆಲವು ತಿಂಗಳಿಂದ ಡಲ್ಲು ಹೊಡೆಯುತ್ತಿದ್ದ ಚಿತ್ರಮಂದಿರಗಳಲ್ಲೀಗ ಪವರ್ ಸುನಾಮಿ. ಆದರೆ, ಇದರ ನಡುವೆಯೇ ಬೇಸರದ ಸುದ್ದಿಯೊಂದು ಹೊರಬಿದ್ದಿದೆ.
ಸಿನಿಮಾವನ್ನು ಮೊಬೈಲ್‍ನಲ್ಲಿ ಸೆರೆಹಿಡಿಯಲು ಹೋದ ವ್ಯಕ್ತಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರಿನ ಶಾರದಾ ಚಿತ್ರಮಂದಿರದಲ್ಲಿ ಅಂಜನೀಪುತ್ರ ಸಿನಿಮಾವನ್ನು ಮೊಬೈಲ್‍ನಲ್ಲಿಯೇ ಶೂಟ್ ಮಾಡುತ್ತಿದ್ದ ಆನಂದ್ ಎಂಬುವವನನ್ನು ಸಿಲ್ವರ್ ಜುಬ್ಲಿ ಪಾರ್ಕ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ವಿಪರ್ಯಾಸವೆಂದರೆ, ಆನಂದ್ ಕೂಡಾ ಪುನೀತ್ ಅವರ ಅಭಿಮಾನಿ. ತನ್ನ ಪತ್ನಿಗೆ ಸಿನಿಮಾ ತೋರಿಸಲು ಮೊಬೈಲ್‍ನಲ್ಲಿ ಶೂಟ್ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ. ಇತ್ತೀಚೆಗೆ ಮೊಬೈಲ್‍ನಲ್ಲಿ ಶೂಟ್ ಮಾಡುವುದು, ಸಿನಿಮಾ ಥಿಯೇಟರ್‍ನಿಂದಲೆ ಫೇಸ್‍ಬುಕ್ ಲೈವ್ ಕೊಡುವುದು ಹೆಚ್ಚುತ್ತಿದೆ. ಭರ್ಜರಿ, ಮಫ್ತಿ ಮೊದಲಾದ ಚಿತ್ರಗಳಿಗೆ ಅಭಿಮಾನಿಗಳಿಂದಲೇ ಇಂಥಾದ್ದೊಂದು ಸಮಸ್ಯೆ ಎದುರಾಗಿತ್ತು. ಈಗ ಅಪ್ಪು ಸಿನಿಮಾಗೂ ಮತ್ತದೇ ಅಭಿಮಾನಿಗಳ ಕಾಟ. ಸಿನಿಮಾವನ್ನು ಥಿಯೇಟರ್‍ನಲ್ಲಿ ನೋಡಿದರೆ ಅದರಿಂದ ಚಿತ್ರರಂಗಕ್ಕೆ ಒಳ್ಳೆಯದೇ ಹೊರತು, ಇಂಥ ಅಡ್ಡದಾರಗಳಿಂದ ಅಲ್ಲ.