ಚಮಕ್, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸಿಂಪಲ್ ಖ್ಯಾತಿಯ ಸುನಿ ಮತ್ತು ಕಿರಿಕ್ ಪಾರ್ಟಿಯ ರಶ್ಮಿಕಾ ಸಂಗಮದ ಸಿನಿಮಾ. ಚಿತ್ರದ ಕುರಿತಂತೆ ಅಭಿಮಾನಿಗಳಿಗೆ ಯಾವ ಪರಿ ಕುತೂಹಲ ಇದೆಯೆಂದರೆ, ಚಿತ್ರದ ಕಥೆ ಏನು ಅನ್ನೋದನ್ನು ಕಲ್ಪನೆ ಮಾಡಿಕೊಳ್ಳೋಕೂ ಆಗ್ತಾ ಇಲ್ಲ. ಅದಕ್ಕೆ ಕಾರಣವಾಗಿರೋದು ಚಮಕ್ ಚಿತ್ರದ ಫಸ್ಟ್ ನೈಟ್ ಟೀಸರ್.
ಸುನಿ ರಿಲೀಸ್ ಮಾಡಿದ ಫಸ್ಟ್ ನೈಟ್ ಟೀಸರ್‍ನಲ್ಲಿನ ತುಂಟತನವಿದೆಯಲ್ಲ.. ಅದು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ. ಏನೋ ಆಗುತ್ತೆ ಅಂತಾ ಕಾಯ್ತಿರ್ತಾರೆ. ಏನೂ ಆಗಲ್ಲ. ಸುನಿ ಸ್ಟೈಲ್‍ನಲ್ಲೊಂದು ಸಿಂಗಲ್ ಮೀನಿಂಗ್ ಡೈಲಾಗ್ ಆದರೂ ಇರುತ್ತಾ ಅಂದ್ರೆ, ಅದೂ ಬರಲ್ಲ. ಆದರೂ.. ಆ ಟೀಸರ್ ಒಂದು ರೋಮಾಂಚನ ಸೃಷ್ಟಿಸಿಬಿಟ್ಟಿದೆ. ಕಲ್ಪನೆಯ ಬಲೂನುಗಳನ್ನು ಪ್ರೇಕ್ಷಕರ ಎದೆಗೂಡಲ್ಲಿ ನೆಟ್ಟುಬಿಟ್ಟಿದೆ.
ಹೀಗಾಗಿಯೇ ರಿಲೀಸ್ ಡೇಟ್ ಅನೌನ್ಸ್ ಆಗುವ ಮುನ್ನವೇ, ಎಲ್ಲರೂ ಕೇಳ್ತಿರೋ ಪ್ರಶ್ನೆ ಅದೊಂದೇ. ಲೈಟ್ ಯಾವಾಗ ಆಫ್ ಮಾಡ್ತೀರಾ ಅಂತಾ. ಅಫ್‍ಕೋರ್ಸ್, ಸಿನಿಮಾ ರಿಲೀಸ್ ಆದ ಮೇಲೆ ಥಿಯೇಟರ್‍ನಲ್ಲಿ ಲೈಟ್ ಆಫ್ ಆಗೇ ಆಗುತ್ತೆ ಅಂತಾ ಹೇಳೋ ಸುನಿ, ಪ್ರೆಕ್ಷಕರ ತಲೆಗೆ ಹುಳ ಬಿಡ್ತಾರೆಯೇ ಹೊರತು, ಕಥೆ ಮಾತ್ರ ಹೇಳಲ್ಲ. ಎಷ್ಟು ದಿನ ಹೇಳಲ್ಲ..? ಸಿನಿಮಾ ರಿಲೀಸ್ ಆಗುತ್ತಲ್ವಾ..? ನೋಡ್ತೀವಿ ಬಿಡಿ ಅಂಥಾ ಪ್ರೇಕ್ಷಕರೇ ಸುನಿಗೆ ಚಾಲೆಂಜ್ ಹಾಕಿ ಕಾದು ಕೂರುವಂತಾಗಿದೆ.