ಯೋಗರಾಜ್ ಭಟ್ ಹೊಸ ಮುಖ, ಪ್ರತಿಭೆಗಳ ಅನ್ವೇಷಣೆಗೆ ಹೆಸರುವಾಸಿ. ಇತ್ತೀಚೆಗೆ ಮುಗುಳ್ನಗೆ ಚಿತ್ರದ ನಂತರ ಸ್ವಲ್ಪ ಬಿಡುವಾಗಿದ್ದ ಭಟ್ಟರು, ಕನಕಪುರ ಶ್ರೀನಿವಾಸ್ ಜೊತೆಗಿನ ಕಾನೂನು ಹೋರಾಟದಲ್ಲಿ ಬ್ಯುಸಿಯಾಗಿದ್ದರು.
ಈ ಮಧ್ಯೆ ಭಟ್ಟರ ಹೊಸ ಸಿನಿಮಾಗಳ ಬಗ್ಗೆ ಕೇಳಿಬಂದಿದ್ದ ಸುದ್ದಿಗಳು ಮೂರು. ಹೊಸಬರ ಜೊತೆ ಚಿತ್ರ ಮಾಡ್ತಾರಂತೆ ಅನ್ನೋದು ಮೊದಲನೆಯದ್ದು. ಎರಡನೆಯದ್ದು ಪುನೀತ್ ಜೊತೆ ಮತ್ತೊಂದು ಸಿನಿಮಾ. ಮೂರನೇ ಸುದ್ದಿ ಶಿವರಾಜ್ ಕುಮಾರ್ ಜೊತೆ ಸಿನಿಮಾ. ಈಗ ಆ 3 ಸುದ್ದಿಗಳಲ್ಲಿ ಮೊದಲ ಸುದ್ದಿಗೆ ಆದ್ಯತೆ ಕೊಟ್ಟಿದ್ದಾರೆ ಯೋಗರಾಜ್ ಭಟ್.
ನಾಲ್ವರು ಹೊಸ ಪ್ರತಿಭೆಗಳನ್ನು ಹೀರೋ ಮಾಡುತ್ತಿರುವ ಯೋಗರಾಜ್ ಭಟ್, ಈ ಚಿತ್ರಕ್ಕೆ ತಾವೇ ನಿರ್ಮಾಪಕರು ಹಾಗೂ ನಿರ್ದೇಶಕರು. ನಾಳೆ ಅಂದ್ರೆ ಡಿಸೆಂಬರ್ 6ರಂದು ಸ್ಕ್ರಿಪ್ಟ್ ಪೂಜೆ ಮಾಡಿಕೊಂಡು ಮುಹೂರ್ತಕ್ಕೆ ರೆಡಿಯಾಗುತ್ತಿದ್ದಾರೆ. ಡಿಸೆಂಬರ್ 20ರಿಂದ ಶೂಟಿಂಗ್ ಶುರುವಾಗಲಿದೆ.
ಸಂಗೀತ ಎಂದಿನಂತೆ ಹರಿಕೃಷ್ಣ ಅವರದ್ದು. ಸುಜ್ಞಾನಮೂರ್ತಿ ಕ್ಯಾಮೆರಾ ಕೈಚಳಕ ಇರುತ್ತೆ. ಆಯ್ಕೆಯಾಗದೇ ಇರುವುದು ನಾಯಕಿ ಮಾತ್ರ. ನಾಯಕಿಯರಿಗಾಗಿ ತಲಾಶ್ ಮಾಡುತ್ತಿರುವ ಯೋಗರಾಜ್ ಭಟ್, ಹೊಸ ಮುಖಗಳನ್ನೇ ಹುಡುಕುತ್ತಿದ್ದಾರೆ.