ಭಜರಂಗಿ, ವಜ್ರಕಾಯ, ಮಾರುತಿ 800 ಹೀಗೆ ಸತತ ಹಿಟ್ ನೀಡಿರುವ ಹರ್ಷ, ಈಗ ಅಂಜನೀಪುತ್ರದ ಬಿಡುಗಡೆಯ ಖುಷಿಯಲ್ಲಿದ್ದಾರೆ. ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನೀಪುತ್ರ ಡಿಸೆಂಬರ್‍ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಈ ಮಧ್ಯೆಯೇ ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರ ಶುರುವಾಗಿದೆ. ಬಸವನಗುಡಿಯ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಚಿತ್ರಕ್ಕೆ ಆರಂಭ ಫಲಕ ತೋರಿದರೆ, ನಿರ್ಮಾಪಕ ಮುನಿರತ್ನ ಕ್ಯಾಮೆರಾಕ್ಕೆ ಚಾಲನೆ ನೀಡಿದರು.
ಚಿನ್ನಾಂಬಿಕ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವನ್ನು ಕುಮಾರಸ್ವಾಮಿ ಅರ್ಪಿಸುತ್ತಿದ್ದರೆ, ನಿರ್ಮಾಪಕಿಯಾಗಿರುವುದು ಅನಿತಾ ಕುಮಾರಸ್ವಾಮಿ. ಚಿತ್ರಕ್ಕೆ ನಿಖಿಲ್ ನಾಯಕರಾದರೆ, ಶರತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕಿದೆ.
ರವಿ ಬಸ್ರೂರು ಸಂಗೀತ ನಿರ್ದೇಶಿಸುತ್ತಿದ್ದು, ಸ್ವಾಮಿ ಛಾಯಾಗ್ರಹಣವಿದೆ. ರಾಮ್ ಲಕ್ಷ್ಮಣ್ ಸಾಹಸ ನಿರ್ದೇಶನದ ಚಿತ್ರಕ್ಕೆ ಮೋಹನ್ ಬಿ. ಕೆರೆ ಕಲಾ ನಿರ್ದೇಶನವಿದೆ. ನಿರ್ಮಾಣ ಮೇಲ್ವಿಚಾರಣೆಯ ಹೊಣೆ ಸುನಿಲ್ ಗೌಡ ಅವರದ್ದು.
ಡಿಸೆಂಬರ್ 10ರಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದ್ದು, ಬೆಂಗಳೂರು, ಹಾಸನ, ಮಂಡ್ಯ, ಸಕಲೇಶಪುರ ಸೇರಿದಂತೆ ಕರ್ನಾಟಕದಲ್ಲಿಯೇ ಶೂಟಿಂಗ್ ನಡೆಯಲಿದೆ. ಬೆಂಗಳೂರಿನ 7 ಕಡೆ ಚಿತ್ರಕ್ಕಾಗಿ ವಿಶೇಷ ಸೆಟ್ ಹಾಕಿಸುತ್ತಿದ್ದಾರೆ ಹರ್ಷ.