ಹರ್ಷಿಕಾ ಪೂಣಚ್ಚ ಚಿಟ್ಟೆಯಾಗಿದ್ದಾರೆ. ಅದು ಚಿಟ್ಟೆ ಸಿನಿಮಾಗೆ. ಚಿಟ್ಟೆ ಮತ್ತು ಹೆಣ್ಣಿನ ಸಂಬಂಧಗಳ ಬಗ್ಗೆ ಇರುವ ಕಥೆಯಲ್ಲಿ ಹರ್ಷಿಕಾ ಅವರನ್ನು ಚಿಟ್ಟೆಗೆ ಹೋಲಿಸಲಾಗಿದೆ. ಚಿತ್ರದ ಚಿತ್ರೀಕರಣ ವೇಳೆ ಹರ್ಷಿಕಾ ಮೈಮೇಲೆಲ್ಲ ಚಿಟ್ಟೆಯ ಹಚ್ಚೆ ಹಾಕಿಸಿಕೊಂಡು ಕಂಗೊಳಿಸಿದ್ದಾರೆ.
ಮೈಮೇಲೆ ಚಿಟ್ಟೆ ಹಾಕಿಕೊಂಡ ನಂತರ ನೋಡಿದರೆ, ಹರ್ಷಿಕಾ ಎಂದಿಗಿಂತ ಮುದ್ದಾಗಿಯೇ ಕಾಣಿಸ್ತಾರೆ ಅನ್ನೋದೇನೋ ನಿಜ. ಆದರೆ, ಅದಕ್ಕಾಗಿ ಪ್ರತಿದಿನ ಹರ್ಷಿಕಾ 3ರಿಂದ 4 ಗಂಟೆಗೆ ಮೇಕಪ್ ಮಾಡಿಸಿಕೊಳ್ಳಬೇಕಿತ್ತಂತೆ. ಶೂಟಿಂಗ್ ಶುರುವಾಗುವ 3 ಗಂಟೆ ಮುಂಚೆ ಸೆಟ್‍ಗೆ ಹೋಗುತ್ತಿದ್ದ ಹರ್ಷಿಕಾ, ಮೈತುಂಬಾ ಹಚ್ಚೆ ಹಾಕಿಸಿಕೊಂಡು ಚಿತ್ರದಲ್ಲಿ ನಟಿಸಿದ್ಧಾರೆ. ಚಂದನಾ ಆರಾಧ್ಯ ಎಂಬ ಕಲಾವಿದೆ ಹರ್ಷಿಕಾ ಮೈಮೇಲೆ ಹಚ್ಚೆ ಬಿಡಿಸಿರುವ ಪ್ರತಿಭೆ.
ಇದು ಎಂ.ಎಲ್. ಪ್ರಸನ್ನ ನಿರ್ದೇಶನದ ಚಿತ್ರ. ಶಶಾಂಕ್ ನಿರ್ದೇಶನದ ಬಹುತೇಕ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಪ್ರಸನ್ನ, ಹಲವು ಸ್ಟಾರ್ ಚಿತ್ರಗಳ ಚಿತ್ರಕ್ಕೆ ಡೈಲಾಗ್ ಕೊಟ್ಟಿದ್ದಾರೆ. ಚಿತ್ರದಲ್ಲಿ ನಾಯಕ ಪೇಂಟಿಂಗ್ ಕಲಾವಿದ. ಒಂದು ಹಂತದಲ್ಲಿ ನಾಯಕಿ ಅವನಿಗೆ ತನ್ನ ಮೈಮೇಲೆ ಪೇಂಟಿಂಗ್ ಮಾಡುವಂತೆ ಕೇಳಿಕೊಳ್ಳುತ್ತಾಳೆ. ನಂತರ ಚಿತ್ರ ಬೇರೆಯೇ ತಿರುವು ಪಡೆಯುತ್ತೆ. ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಎಂದಿದ್ದಾರೆ ಪ್ರಸನ್ನ.