ಶಂಕರ್ನಾಗ್. ಕನ್ನಡಿಗರು ಮರೆಯದ ಮಾಣಿಕ್ಯ. ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದರೂ, ಸಾಧನೆಯ ಶಿಖರವನ್ನೇ ಸೃಷ್ಟಿಸಿದ್ದ ಕಲಾವಿದ, ನಿರ್ದೇಶಕ, ತಂತ್ರಜ್ಞ. ನಮ್ಮನ್ನಗಲಿ 3 ದಶಕಗಳಾಗಿದ್ದರೂ, ಶಂಕರ್ ನಾಗ್ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ.
ಆಟೋ ಡ್ರೈವರ್ಗಳ ಪಾಲಿಗೆ ಆಟೋ ರಾಜನಾಗಿ, ಕ್ಲಾಸಿಕ್ ಚಿತ್ರ ಮೆಚ್ಚುವವರ ಕಣ್ಣಲ್ಲಿ ವಿಭಿನ್ನ ದೃಷ್ಟಿಕೋನದ ನಿರ್ದೇಶಕರಾಗಿ, ಕಮಷಿಯಲ್ ಚಿತ್ರಪ್ರೇಮಿಗಳ ನೆನಪಲ್ಲಿ ಸಾಂಗ್ಲಿಯಾನ ಆಗಿ, ಕನಸುಗಾರರಿಗೆ ಸದಾ ಸ್ಫೂರ್ತಿಯಾಗಿದ್ದಾರೆ.
ಇಂತಹ ಶಂಕರ್ನಾಗ್ ಅವರ ಜೀವನ ಚರಿತ್ರೆ, ಈಗ ಶಾಲಾ ಪಠ್ಯಗಳಲ್ಲೂ ಸೇರಿದೆ ಎನ್ನುವುದೇ ಹೆಮ್ಮೆಯ ವಿಚಾರ. 8ನೇ ತರಗತಿಯ ಕನ್ನಡ ಪುಸ್ತಕದಲ್ಲಿ ಶಂಕರ್ನಾಗ್ ಅವರ ಅಧ್ಯಾಯವೊಂದನ್ನು ಸೇರಿಸಲಾಗಿದೆ. ಇದುವರೆಗೆ ಪಠ್ಯ ಪುಸ್ತಕಗಳಲ್ಲಿ ಡಾ.ರಾಜ್ ಬಗ್ಗೆ ಮಾತ್ರ ಅಧ್ಯಾಯವಿತ್ತು. ಈಗ ಆ ಸಾಲಿಗೆ ಶಂಕರ್ನಾಗ್ ಕೂಡಾ ಸೇರಿದ್ದಾರೆ.