ಟೈಗರ್ ಗಲ್ಲಿ, ನೀನಾಸಂ ಸತೀಶ್ ಪಾಲಿಗೆ ಮಹತ್ವದ ಸಿನಿಮಾ. ಅಪಾರ ನಿರೀಕ್ಷೆಗಳನ್ನಿಟ್ಟುಕೊಂಡು ಮಾಡಿದ್ದ ರಾಕೆಟ್ ಸಿನಿಮಾ ಸೋತ ನಂತರ, ಸತೀಶ್ ಕಂಗಾಲಾಗಿ ಹೋಗಿದ್ದರಂತೆ. ಮನೆ, ಆಫೀಸಿಗೆ ಬೀಗ ಹಾಕಿ ಏಕಾಂಗಿಯಾಗಿದ್ದರಂತೆ. ಕೆಲವು ದಿನಗಳ ನಂತರ ಇದು ಅಸಾಧ್ಯ ಎಂದೆನ್ನಿಸಿದ ಸಮಯದಲ್ಲಿಯೇ ಕಾಣಿಸಿಕೊಂಡವರು ರವಿ ಶ್ರೀವತ್ಸ.
ಹಲವರಿಗೆ ನೆನಪಿದೆಯೋ..ಇಲ್ಲವೋ.. ನೀನಾಸಂ ಸತೀಶ್ ಮೊದಲು ಬಣ್ಣ ಹಚ್ಚಿದ ಚಿತ್ರ ಮಾದೇಶ. ಅದು ರವಿ ಶ್ರೀವತ್ಸ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ ಚಿತ್ರ. ಆ ಚಿತ್ರದಲ್ಲಿ ಸತೀಶ್ಗೆ ಶಿವರಾಜ್ ಕುಮಾರ್ಗೆ ಅವಾಜ್ ಹಾಕುವ ದೃಶ್ಯದಲ್ಲಿ ಪುಟ್ಟ ಪಾತ್ರ ಕೊಟ್ಟಿದ್ದರು ರವಿ ಶ್ರೀವತ್ಸ.
ಮೊದಲ ಬಾರಿಗೆ ಬಣ್ಣ ಹಚ್ಚಿದ ಚಿತ್ರದಲ್ಲೇ ಶಿವಣ್ಣ ಎದುರಿಗೆ ನಿಂತು ಅವರಿಗೆ ಅವಾಜ್ ಹಾಕುವ ಪಾತ್ರದಲ್ಲಿ ನಟಿಸುವಾಗ ಕೈಕಾಲೇ ಅದುರಿತ್ತಂತೆ. ಆಮೇಲೆ ಸಂಭಾಳಿಸಿಕೊಂಡು ನಟಿಸಿದ್ದೂ ಆಯ್ತು. ಶಿವಣ್ಣನ ಮೆಚ್ಚುಗೆಯೂ ಸಿಕ್ತು. ಈಗ ಇಡೀ ಚಿತ್ರದಲ್ಲಿ ಅಂಥದ್ದೇ ಪಾತ್ರ ನಿಭಾಯಿಸಿದ್ದಾರೆ ನೀನಾಸಂ ಸತೀಶ್.
ಮೊದಲ ಬಾರಿಗೆ ಬಣ್ಣ ಹಚ್ಚುವ ಅವಕಾಶ ಕೊಟ್ಟಿದ್ದ ರವಿ ಶ್ರೀವತ್ಸ, ಈಗ ನಾಯಕನಾಗುವ ಅವಕಾಶ ಕೊಟ್ಟಿದ್ದಾರೆ. ಮೊದಲು ಮೇಕಪ್ ಹಚ್ಚಿಕೊಂಡಾಗ, ಶಿವರಾಜ್ ಕುಮಾರ್ ಎದುರು ಕೆಲವು ನಿಮಿಷಗಳ ಕಾಲ ಅಬ್ಬರಿಸಿದ್ದ ಸತೀಶ್, ಈಗ ಇಡೀ ಚಿತ್ರದಲ್ಲಿ ಅಬ್ಬರಿಸಿದ್ದಾರೆ.