ಬುಕ್ ಮೈ ಶೋ ಆಗಾಗ್ಗೆ ವಿವಾದಕ್ಕೆ ಸಿಲುಕುತ್ತಲೇ ಇದೆ. ಕನ್ನಡ ಚಿತ್ರಗಳ ವಿಚಾರದಲ್ಲಂತೂ ಬುಕ್ ಮೈ ಶೋ ವಿರುದ್ಧ ದೂರುಗಳ ಸರಮಾಲೆಯೇ ಇದೆ. ಇತ್ತೀಚೆಗೆ ಕನ್ನಡ ಚಿತ್ರಗಳಿಗೆ ಟಿಕೆಟ್ ಖಾಲಿಯಿದ್ದರೂ, ಹೌಸ್‍ಫುಲ್ ಎಂದು ತೋರಿಸುವುದು.. ನಂತರ ಶೋ ಶುರುವಾಗದ ಮೇಲೆ ಖಾಲಿ ಖಾಲಿ ತೋರಿಸಿ, ಜನರೇ ಇಲ್ಲ ಎಂಬಂತೆ ಬಿಂಬಿಸಿ ಚಿತ್ರವನ್ನು ಎತ್ತಂಗಡಿ ಮಾಡಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.
ಇನ್ನು ರಿಲೀಸೇ ಆಗದ ಚಿತ್ರಕ್ಕೂ ಕೆಟ್ಟ ವಿಮರ್ಶೆ ಹಾಕಿ ರೇಟಿಂಗ್ ಕೊಡುವ ಕೆಟ್ಟ ಸಂಪ್ರದಾಯವನ್ನೂ ಆರಂಭಿಸಿತ್ತು. ಹೀಗೆ ಸದಾ ವಿವಾದಲ್ಲೇ ಇರುವ ಬುಕ್ ಮೈ ಶೋ ವಿರುದ್ಧ ಈಗ ನಿರ್ಮಾಪಕ ಕೆ.ಮಂಜು ಸಿಟ್ಟಿಗೆದ್ದಿದ್ದಾರೆ.
ಬುಕ್ ಮೈ ಶೋನಲ್ಲಿ ಹಣ ಕೊಟ್ಟರಷ್ಟೇ ಚಿತ್ರದ ಬಗ್ಗೆ ಒಳ್ಳೆ ವಿಮರ್ಶೆ ಬರುತ್ತವೆ. ಒಳ್ಳೆಯ ರೇಟಿಂಗ್ ಕೊಡುತ್ತಾರೆ. ಅದೊಂದು ದೊಡ್ಡ ದಂಧೆ ಎಂದು ಕೆಂಡ ಕಾರಿದ್ದಾರೆ ಮಂಜು. ಅಲ್ಲಿ ಪರ್ಸೆಂಟೇಜ್ ಲೆಕ್ಕಾಚಾರದ ಮೇಲೆ ಸೀಟ್ ಫಿಲ್ಲಿಂಗ್ ಎಂದು ತೋರಿಸಿ ವಂಚಿಸಲಾಗುತ್ತೆ ಎಂಬ ಆರೋಪವನ್ನೂ ಮಾಡಿದ್ದಾರೆ ಮಂಜು.
ಅವರಿಗೆ ಹಣ ಕೊಟ್ಟರೆ, ಯಾವಾಗಲೂ ಶೇ.80ರಷ್ಟು ಫುಲ್ ಎಂಬಂತೆ ತೋರಿಸಿ ಕ್ರೇಜ್ ಸೃಷ್ಟಿಸುತ್ತಾರೆ. ಬೇರೆ ಭಾಷೆಯ ಚಿತ್ರಗಳು ಇಂಥ ದಂಧೆಯನ್ನು ನಡೆಸುತ್ತಿವೆ. ಅಂಥಾದ್ದೊಂದು ಕಾಲ್ ನನಗೂ ಬಂದಿತ್ತು ಎಂಬ ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾರೆ ಮಂಜು.
ಬುಕ್ ಮೈ ಶೋನಲ್ಲಿ ಏನೇನೆಲ್ಲ ಆಗುತ್ತೋ..ಹೇಳೋರ್ಯಾರು..?