ಚಿತ್ರನಟ ಯಶ್ ರಾಜಕೀಯಕ್ಕೆ ಬರ್ತಾರಾ..? ಇಂಥಾದ್ದೊಂದು ಪ್ರಶ್ನೆಯನ್ನು ಇತ್ತೀಚೆಗೆ ಎದುರಿಸುತ್ತಿರುವ ಸ್ಟಾರ್ಗಳಲ್ಲಿ ಯಶ್ ಅವರ ಹೆಸರು ಮುಂಚೂಣಿಯಲ್ಲಿಯೇ ಬರುತ್ತೆ. ಅದಕ್ಕೆ ತಕ್ಕಂತೆ ಅವರು ಉತ್ತರ ಕರ್ನಾಟಕದ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ, ಕೆರೆಗಳನ್ನು ಪುನರುಜ್ಜೀವನಗೊಳಿಸುವ ಕೆಲಸಕ್ಕೆ ಕೈ ಹಾಕಿದಾಗಲಂತೂ, ಇದು ರಾಜಕೀಯ ಪ್ರವೇಶಕ್ಕೆ ಸಿದ್ಧ ಮಾಡಿಕೊಳ್ಳುತ್ತಿರುವ ವೇದಿಕೆ ಎಂದೇ ಹಲವರು ಬಣ್ಣಿಸಿದರು. ಆಗಲೂ ರಾಜಕೀಯ ನಿರಾಕರಿಸಿದ್ದರು ಯಶ್. ಅದೊಂದೇ ಬಾರಿಯಲ್ಲ, ಹಲವು ಬಾರಿ ತಮ್ಮ ರಾಜಕೀಯ ಪ್ರವೇಶಕ್ಕೆ ನೋ ನೋ ಎನ್ನುತ್ತಲೇ ಬಂದಿದ್ದಾರೆ. ಈಗ ಮತ್ತೊಮ್ಮೆ ನೋ ಎಂದಿದ್ದಾರೆ.
ಯಶ್ ಅವರಿಗೆ ಈ ಪ್ರಶ್ನೆ ಮತ್ತೆ ಎದುರಾಗಿದ್ದು ವಿಜಯಪುರದಲ್ಲಿ. ರಾಜ್ಯ ಸರ್ಕಾರದ ಪ್ರಭಾವಿ ಸಚಿವ, ನೀರಾವರಿ ಇಲಾಖೆಯ ಹೊಣೆ ಹೊತ್ತಿರುವ, ಪ್ರಸ್ತುತ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಗುರುತಿಸಿಕೊಂಡಿರುವ ಎಂ.ಬಿ. ಪಾಟೀಲ್ ಅವರ ಹುಟ್ಟುಹಬ್ಬದಲ್ಲಿ. ಸಚಿವರ ಹುಟ್ಟುಹಬ್ಬಕ್ಕೆ ಶುಭಕೋರಲು ಯಶ್ ಮತ್ತು ರಾಧಿಕಾ ವಿಜಯಪುರಕ್ಕೆ ಆಗಮಿಸಿದ್ದರು. ಆಗ ಈ ಪ್ರಶ್ನೆ ಮತ್ತೊಮ್ಮೆ ಎದುರಾಯ್ತು.
ಆಗ ಮತ್ತೊಮ್ಮೆ ಸ್ಪಷ್ಟನೆ ಕೊಟ್ಟ ಯಶ್, ಎಂ.ಬಿ. ಪಾಟೀಲರಿಗೂ ನಮ್ಮ ಕುಟುಂಬಕ್ಕೂ ಹಳೆಯ ಬಾಂಧವ್ಯವಿದೆ. ಹೀಗಾಗಿ ಹುಟ್ಟುಹಬ್ಬಕ್ಕೆ ಶುಭ ಕೋರಲು ಬಂದಿದ್ದೇನೆ. ಇದರ ಹೊರತಾಗಿ ಯಾವುದೇ ರಾಜಕೀಯ ಇಲ್ಲ. ನಾನು ರಾಜಕೀಯಕ್ಕೆ ಬರಲ್ಲ. ಚಿತ್ರರಂಗದಿಂದ ಯಾರೇ ರಾಜಕೀಯಕ್ಕೆ ಬಂದರೂ ಪಕ್ಷಭೇದವಿಲ್ಲದೆ ಬೆಂಬಲ ನೀಡುತ್ತೇನೆ ಎಂದಿದ್ದಾರೆ ಯಶ್.
ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲೂ ಸ್ಪಷ್ಟವಾಗಿ ಮಾತನಾಡಿದ ಯಶ್, ಜಾತಿ ಅನ್ನೋದು ಸಂಸ್ಕøತಿ. ಇರೋದು ಒಂದೇ ಧರ್ಮ. ಅದು ಮಾನವ ಧರ್ಮ. ನನ್ನ ಈ ಭೇಟಿಗೂ, ಲಿಂಗಾಯತ ಧರ್ಮ ವಿಚಾರಕ್ಕೂ ತಳುಕಕು ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.