` ಅವಾರ್ಡ್ ವಾಪ್ಸಿ - ಸುದ್ದಿ ಕೇಳಿ ನಕ್ಕರು ಪ್ರಕಾಶ್ ರೈ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
prakash rai clarifies his award waapsi
Prakash Rai Image

ಪ್ರಕಾಶ್ ರೈ. ಕನ್ನಡ ಹೊರತುಪಡಿಸಿ ಬೇರೆ ಭಾಷೆಯ ಚಿತ್ರರಂಗದಲ್ಲಿ ಪ್ರಕಾಶ್ ರಾಜ್ ಎಂದೇ ಚಿರಪರಿಚಿತ. ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿದವರಲ್ಲಿ ಮುಂಚೂಣಿಯಲ್ಲಿದ್ದ ನಟ. ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಗಳಲ್ಲೂ ಭಾಗಿಯಾಗಿದ್ದ ಪ್ರಕಾಶ್ ರೈಗೆ ಬೆಳಗ್ಗೆ ಒಂದು ಶಾಕಿಂಗ್ ನ್ಯೂಸ್ ಕಾದಿತ್ತು.

ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರಕಾಶ್ ರೈ ತಮಗೆ ಬಂದಿರುವ ರಾಷ್ಟ್ರಪ್ರಶಸ್ತಿಗಳನ್ನು ವಾಪಸ್ ಮಾಡಲಿದ್ದಾರೆ. ಅವಾರ್ಡ್ ವಾಪ್ಸಿ ಪ್ರಕಾಶ್ ರೈ ಅವರಿಂದಲೇ ಶುರುವಾಗಲಿದೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಗಳು ಪ್ರಸಾರ ಮಾಡಿದ್ದವು. ಆದರೆ, ಪ್ರಕಾಶ್ ರೈ ಹೇಳಿದ್ದುದೇ ಬೇರೆ. ಏನಿದು ಗೊಂದಲ ಎಂಬ ಬಗ್ಗೆ ಸ್ವತಃ ಪ್ರಕಾಶ್ ರೈ ಸ್ಪಷ್ಟನೆ ಕೊಟ್ಟಿದ್ದಾರೆ.

ಆ ಸುದ್ದಿ ನೋಡಿದಾಗ ನಕ್ಕುಬಿಟ್ಟೆ. ಏಕೆಂದರೆ, ನನಗೆ ಬಂದಿರುವ ಪ್ರಶಸ್ತಿಗಳ ನನಗೆ ಗೌರವವಿದೆ. ಅವುಗಳನ್ನು ಹಿಂದಿರುಗಿಸುವ ಪ್ರಯತ್ನವನ್ನು ನಾನು ಮಾಡುವುದಿಲ್ಲ. ಆದರೆ, ಗೌರಿ ಲಂಕೇಶ್ ಹತ್ಯೆಯ ಬಗ್ಗೆ ನನಗೆ ಆಕ್ರೋಶವಿದೆ. ಕೆಲವರು ಅವರ ಸಾವನ್ನು ಸಂಭ್ರಮಿಸಿದ್ದಾರೆ. ಈ ಬಗ್ಗೆ ಕಠಿಣ ಸಂದೇಶ ರವಾನೆಯಾಗಬೇಕು. ಪ್ರಧಾನಿ ಮೋದಿ ಈ ಬಗ್ಗೆ ಮಾತನಾಡಿ, ಒಂದು ಸ್ಪಷ್ಟ ಸಂದೇಶ ಕೊಡಬೇಕು ಎಂಬುದು ನನ್ನ ಆಗ್ರಹ. ಇದು ಪ್ರಕಾಶ್ ರೈ ಅವರ ಸ್ಪಷ್ಟನೆ.

ಇಷ್ಟಕ್ಕೂ ಡಿವೈಎಫ್​ಐ ಕಾರ್ಯಕ್ರಮದಲ್ಲಿ ಪ್ರಕಾಶ್ ರೈ ಹೇಳಿದ್ದೇನು ಗೊತ್ತಾ..? ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪೂಜೆ ಮಾಡುತ್ತಿರುವ ದೃಶ್ಯಗಳನ್ನು ನೋಡಿದೆ. ಅವರು ಎಷ್ಟು ಚೆನ್ನಾಗಿ ನಾಟಕ ಮಾಡುತ್ತಾರೆಂದರೆ, ನನಗೆ ಬಂದಿರುವ ಪ್ರಶಸ್ತಿಗಳನ್ನೆಲ್ಲ ಈ ರಾಜಕಾರಣಿಗಳಿಗೇ ಕೊಟ್ಟು ಬಿಡಬೇಕು ಎನಿಸುತ್ತೆ ಎಂದಿದ್ದರು. ಆದರೆ, ಈ ಮಾತಿನಲ್ಲಿರುವ ವ್ಯಂಗ್ಯವನ್ನೇ ಅರ್ಥ ಮಾಡಿಕೊಳ್ಳದ ಇಂಗ್ಲಿಷ್ ಚಾನೆಲ್​ಗಳು ಅದನ್ನು ಅವಾರ್ಡ್ ವಾಪ್ಸಿ ಸುದ್ದಿಯಾಗಿಸಿಬಿಟ್ಟವು. 

ಇಂಗ್ಲಿಷ್ ಮಾಧ್ಯಮಗಳು ಇದನ್ನು ಅರ್ಥ ಮಾಡಿಕೊಳ್ಳಲು ಎಡವಿದ್ದಕ್ಕೂ ಕಾರಣವಿದೆ. ಏಕೆಂದರೆ ಪ್ರಕಾಶ್ ರೈ ಕನ್ನಡದಲ್ಲಿ ಮಾತನಾಡಿದ್ದರು. ಇಂಗ್ಲಿಷ್ ಚಾನೆಲ್​ನವರಿಗೆ ಮೊದಲೇ ಕನ್ನಡ ಬರಲ್ಲ. ಏನ್ ಮಾಡೋಕಾಗುತ್ತೆ..? ಆದರೆ, ಪ್ರಕಾಶ್ ರೈ ಹೇಳಿಕೆ, ಇಂಗ್ಲಿಷ್ ಚಾನೆಲ್​ಗಳಿಗೆ ಇಡೀ ದಿನ ಸುದ್ದಿಗೆ ಆಹಾರವಾಗಿದ್ದಂತೂ ಹೌದು.