ಒಬ್ಬರು ಚಾಲೆಂಜಿಂಗ್ ಸ್ಟಾರ್. ಕರ್ನಾಟಕದಲ್ಲಿ ಅತೀ ಹೆಚ್ಚು ಫ್ಯಾನ್ ಫಾಲೋವರ್ಸ್ ಇರುವ ನಟ. ಮತ್ತೊಬ್ಬರು ಮಿಲನ ಪ್ರಕಾಶ್. ಹಿಟ್ ಮೇಲೆ ಹಿಟ್ ಕೊಟ್ಟಿರುವ ನಿರ್ದೇಶಕ. ಈ ಇಬ್ಬರೂ ಒಟ್ಟಾಗಿರುವುದು ತಾರಕ್ ಚಿತ್ರದಲ್ಲಿ. ಈ ಇಬ್ಬರದ್ದೂ ಒಂದೇ ಒಂದು ವಿಶೇಷತೆಯೆಂದರೆ, ಇಬ್ಬರೂ ಮಹಾಮೌನಿಗಳು. ಹಾಗೆಂದು ಮಾತನಾಡುವುದೇ ಇಲ್ಲ ಎಂದಲ್ಲ. ಆದರೆ, ಮಾಧ್ಯಮಗಳಿಂದ ಒಂದು ಅಂತರ ಕಾಯ್ದುಕೊಂಡೇ ಬಂದವರು.
ತಮ್ಮ ಚಿತ್ರದ ಬಗ್ಗೆ ದರ್ಶನ್ ಮಾತನಾಡುವುದು ಕಡಿಮೆ ಎಂದೇ ಹೇಳಬೇಕು. ಏಕೆಂದರೆ, ಆ ಕೆಲಸವನ್ನು ಅಭಿಮಾನಿಗಳು ಮಾಡಿಬಿಡುತ್ತಾರೆ. ಹೀಗಾಗಿ ದರ್ಶನ್ ಮಾತನಾಡಲಿ, ಬಿಡಲಿ.. ಚಿತ್ರಕ್ಕೊಂದು ಹೈಪ್ ಅಭಿಮಾನಿಗಳಿಂದಲೇ ಸೃಷ್ಟಿಯಾಗಿಬಿಟ್ಟಿರುತ್ತೆ.
ಇನ್ನು ಮಿಲನ ಪ್ರಕಾಶ್ ವಿಚಾರಕ್ಕೆ ಬಂದರೆ, ಅವರು ಹೇಳೊದೇ ಬೇರೆ. ನಾವು ಮಾತನಾಡೋದಲ್ಲ. ಚಿತ್ರ ಮಾತನಾಡಬೇಕು ಅಂತಾರೆ ಪ್ರಕಾಶ್. ಸಿನಿಮಾಗೆ ಪಬ್ಲಿಸಿಟಿ ಕೊಡಬೇಕು ನಿಜ. ಅದನ್ನು ನಾವು ಮಾಡಿದ್ದೇವೆ. ಹಾಗೆಂದು ಚಿತ್ರವನ್ನು ವಿನಾಕಾರಣ ಉಬ್ಬಿಸಬಾರದು. ಚಿತ್ರದ ಕಥೆ ಮತ್ತು ಸಿನಿಮಾ ಬಗ್ಗೆ ನಮಗೆ ನಂಬಿಕೆಯಿರಬೇಕು. ಚಿತ್ರವನ್ನು ಗೆಲ್ಲಿಸುವುದೇ ಚಿತ್ರದ ಕಥೆ ಅಂತಾರೆ ಪ್ರಕಾಶ್.