ಧ್ರುವ ಸರ್ಜಾ ಮತ್ತು ಚೇತನ್ ಕಾಂಬಿನೇಷನ್‌ನ 2ನೇ ಚಿತ್ರ, ಧ್ರುವ ಸರ್ಜಾರ ಮೂರನೇ ಚಿತ್ರ ಭರ್ಜರಿ. ಹಿಂದಿನ ಎರಡೂ ಚಿತ್ರಗಳಲ್ಲಿ ಧ್ರುವಾಗೆ ನಾಯಕಿ ಒಬ್ಬರೇ. ರಾಧಿಕಾ ಪಂಡಿತ್. ಆದರೆ, 3ನೇ ಚಿತ್ರದಲ್ಲಿ ಧ್ರುವ ಮೂರು ಗೊಂಬೆಗಳ ಜೊತೆ ರೊಮ್ಯಾನ್ಸ್ ಮಾಡುತ್ತಿದ್ಧಾರೆ.
ಆರ್.ಎಸ್. ಪ್ರೊಡಕ್ಷನ್ಸ್‌ನ ಈ ಸಿನಿಮಾದಲ್ಲಿ ರಚಿತಾ ರಾಮ್, ಹರಿಪ್ರಿಯಾ ಹಾಗೂ ವೈಶಾಲಿ ನಾಯಕಿಯರು. ಪ್ರಮುಖ ನಾಯಕಿ ರಚಿತಾರಾಮ್. ಇನ್ನೊಂದು ಪ್ರಮುಖ ಪಾತ್ರದಲ್ಲಿ ಹರಿಪ್ರಿಯಾ ನಟಿಸಿದ್ದರೆ, ಮತ್ತೊಂದು ಮುಖ್ಯ ಪಾತ್ರದಲ್ಲಿ ವೈಶಾಲಿ ದೀಪಕ್ ನಟಿಸಿದ್ದಾರೆ. ಈ ಮೂರೂ ಗೊಂಬೆಗಳು ಒಂದೇ ಹಾಡಿನಲ್ಲಿ ಧ್ರುವ ಜತೆ ಹೆಜ್ಜೆ ಹಾಕಿರುವುದು ವಿಶೇಷ.
ಏನಿದು ವಿಶೇಷದ ಹಿಂದಿನ ರಹಸ್ಯ ಎಂದು ಹುಡುಕಿದರೆ, ನಿರ್ದೇಶಕ ಚೇತನ್ ಉತ್ತರ ಕೊಡಲ್ಲ. ಸಿನಿಮಾ ನೋಡಿ, ಎಲ್ಲ ಪಾತ್ರಗಳಿಗೂ ಸ್ಪೇಸ್ ಇದೆ. ಕತೆ ಸಾಗುತ್ತಿರುವಾಗ ಹರಿಪ್ರಿಯಾ ಮತ್ತು ವೈಶಾಲಿ ಪಾತ್ರ ಬರುತ್ತದೆ. ರಚಿತಾ ಅವರದ್ದು ಜಡ್ಜ್‌ಮೆಂಟ್ ಸಿಗದೇ ಇರುವ ಪಾತ್ರ. ಹರಿಪ್ರಿಯಾ ಅವರದ್ದು ಸ್ವಲ್ಪ ಸಸ್ಪೆನ್ಸ್ ಉಳ್ಳ ಪಾತ್ರ. ಇವತ್ತಿನ ಜನರೇಶನ್‌ಗೆ ತಕ್ಕಂತೆ ಸಿಕ್ಕಾಪಟ್ಟೆ ಎನರ್ಜಿಟಿಕ್ ಪಾತ್ರದಲ್ಲಿ ವೈಶಾಲಿ ನಟಿಸಿದ್ದಾರೆ ಅಂತಾರೆ.
ಅಂದಹಾಗೆ ಧ್ರುವ ಸಿನಿಮಾಗಳಲ್ಲಿ ಮಾಸ್ಗೆ ಇಷ್ಟವಾಗುವ ಡೈಲಾಗ್ಗಳು ಕಾಮನ್. ಆದರೆ, ಧ್ರುವಗಿಂತಾ ನಾನೇ ಹೆಚ್ಚು ಮಾತನಾಡಿದ್ದೇನೆ ಎನ್ನುತ್ತಾರೆ ರಚಿತಾ. ಅವರ ಪಾತ್ರದ ಹೆಸರು ಗೌರಿಯಂತೆ. ಹೀಗಾಗಿಯೇ ಪುಟ್ಟಗೌರಿ ಹಾಡು ರೆಡಿಯಾಗಿರೋದು. ಸೆಕೆಂಡ್ ಆಫ್‌ನಲ್ಲಿ ಅಯ್ಯೋ ಗೌರಿಗೆ ಹೀಗೆ ಆಗಬಾರದಿತ್ತು ಅಂತಾ ನೀವು ಬೇಜಾರ್ ಮಾಡ್ಕೋತೀರಾ ಅಂತಾನೇ ಇನ್ನೊಂದು ಡಿಂಪಲ್ ಬೀಳಿಸ್ತಾರೆ ರಚಿತಾ.
ಭರ್ಜರಿ ಚಿತ್ರದಲ್ಲಿ ನಾಯಕನಿಗಿರುವಷ್ಟೇ ಪ್ರಾಮುಖ್ಯತೆ ಮೂವರು ನಾಯಕಿಯರಿಗೂ ಇದೆ. ಮೂವರಿಗೂ ಒಟ್ಟಿಗೆ ನಟಿಸುವ ಸಾಕಷ್ಟು ದೃಶ್ಯಗಳಿವೆ. ಯಾರೂ ತಮ್ಮ ಸ್ಟಾರ್‌ಗಿರಿಯನ್ನು ತೋರಿಸಿಕೊಂಡಿಲ್ಲ. ಇದು ಭರ್ಜರಿ ಹೈಲೈಟ್ಸ್.