ಚುನಾವಣೆ ಹತ್ತಿರ ಬರುತ್ತಿದ್ದಂತೆ ಚಿತ್ರರಂಗದ ಹಲವರಿಗೆ ರಾಜಕೀಯ ಪಕ್ಷಗಳು ಗಾಳ ಹಾಕುವುದು ಹೊಸದೇನೂ ಅಲ್ಲ. ಚಿತ್ರರಂಗದಲ್ಲಿ ಹಲವರು ಈಗಾಗಲೇ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಉಪೇಂದ್ರ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಹೊಸ ಪಕ್ಷವನ್ನೇ ಸ್ಥಾಪಿಸುತ್ತಿದ್ದಾರೆ. ಹೀಗಿರುವಾಗಲೇ ಲಹರಿ ಸಂಸ್ಥೆಯ ಮಾಲೀಕ ಲಹರಿ ವೇಲು ಬಿಜೆಪಿ ಸೇರಲು ನಿರ್ಧರಿಸಿದ್ದಾರೆ.
ನನಗೆ ಬಹಳ ದಿನಗಳಿಂದ ಸೇವೆ ಮಾಡುವ, ರಾಜಕೀಯ ಸೇರುವ ಬಯಕೆಯಿತ್ತು. ನನ್ನ ಕುಟುಂಬದಲ್ಲಿ ಯಾರೊಬ್ಬರೂ ರಾಜಕೀಯದಲ್ಲಿರಲಿಲ್ಲ. ಇತ್ತೀಚೆಗೆ ಯಡಿಯೂರಪ್ಪನವರು ನನ್ನನ್ನು ಕರೆಸಿಕೊಂಡು ಪಕ್ಷಕ್ಕೆ ಸೇರುವ ಆಹ್ವಾನ ನೀಡಿದರು. ಮನೆಯವರ ಜೊತೆ ಚರ್ಚೆ ನಡೆಸಿ ಆಹ್ವಾನವನ್ನು ಒಪ್ಪಿಕೊಂಡೆ ಎಂದಿದ್ದಾರೆ ಲಹರಿ ವೇಲು.
ಬುಧವಾರ, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಲಹರಿ ವೇಲು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ. ಯಡಿಯೂರಪ್ಪನವರೇ ಲಹರಿ ವೇಲು ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ.
ಲಹರಿ ವೇಲು ಕನ್ನಡದ ಸಂಗೀತ ಲೋಕದಲ್ಲಿ ದಾಖಲೆಯನ್ನೇ ಬರೆದವರು. ವೇಲು ಎಂದರೆ ಯಾರು ಎನ್ನುವವರು ಕೂಡಾ ಲಹರಿ ವೇಲು ಎಂದರೆ ತಕ್ಷಣ ನೆನಪಿಸಿಕೊಳ್ಳುತ್ತಾರೆ. ಅವರ ಸಂಸ್ಥೆ ಕೇವಲ ಕನ್ನಡದಲ್ಲಷ್ಟೇ ಅಲ್ಲ, ಬೇರೆ ಭಾಷೆಯ ಚಿತ್ರರಂಗದಲ್ಲೂ ದಾಖಲೆ ಬರೆದಿದೆ. ಅಷ್ಟರ ಮಟ್ಟಿಗೆ ತಾವೇ ಕಟ್ಟಿದ ಸಂಸ್ಥೆಯಿಂದ ಗುರುತಿಸಿಕೊಂಡ ಲಹರಿ ವೇಲು, ಈಗ ರಾಜಕಾರಣ ಪ್ರವೇಶ ಮಾಡುತ್ತಿದ್ದಾರೆ.