ಉಪೇಂದ್ರ ರಾಜಕೀಯಕ್ಕೆ ಬರುತ್ತಾರೆ, ಪ್ರಜಾಕೀಯ ಎಂಬ ಹೊಸ ಪಕ್ಷ ಕಟ್ಟುತ್ತಿದ್ದಾರೆ ಎಂದು ಸುದ್ದಿಯಾದ ತಕ್ಷಣವೇ ಇಂಥಾದ್ದೊಂದು ನಿರೀಕ್ಷೆ ಎಲ್ಲರಿಗೂ ಇತ್ತು. ಕೆಲವರು ಹಾಗೆ. ದುಡ್ಡು ದುಡಿಯಲು ಸುಲಭೋಪಾಯ ಕಂಡುಕೊಂಡು ಬಿಡುತ್ತಾರೆ. ಈಗ ಉಪೇಂದ್ರ ಅವರ ಪ್ರಜಾಕೀಯ ಪಕ್ಷಕ್ಕೂ ಇದೇ ಸವಾಲು ಎದುರಾಗಿದೆ. ಆದರೆ, ಆ ಸವಾಲನ್ನು ಸ್ವತಃ ಉಪೇಂದ್ರ ಬಹಿರಂಗಪಡಿಸಿದ್ದಾರೆ.
ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಅವರ ಹೆಸರಿನಲ್ಲಿ ಹಣ ವಸೂಲು ಮಾಡುತ್ತಿರುವವನ ಫೋಟೋ ಹಾಕಿ, ಇವನೊಬ್ಬ 420. ಇವನ ಮಾತನ್ನು ನಂಬಬೇಡಿ ಎಂದಿದ್ದಾರೆ. ಇವನ ಹೆಸರೇನೋ ಗೊತ್ತಿಲ್ಲ. ಆದರೆ ಈ ಹಿಂದೆ ಉಪೇಂದ್ರ ಅಭಿಮಾನಿ ಸಂಘದಲ್ಲಿದ್ದನಂತೆ. ಆಗಲೂ ಇದೇ ರೀತಿ ಉಪೇಂದ್ರ ಹೆಸರಲ್ಲಿ ಇದೇ ರೀತಿ ಹಣ ವಸೂಲಿಗೆ ಯತ್ನಿಸಿದಾಗ, ಉಪೇಂದ್ರರೇ ಅತನನ್ನು ದೂರವಿಟ್ಟಿದ್ದರಂತೆ. ಈಗ ಉಪೇಂದ್ರ ಪ್ರಜಾಕೀಯದ ಹೆಸರು ಹೇಳಿದ್ದೇ ಮತ್ತೆ ಚಿಗಿತುಕೊಂಡಿರುವ ಈತ, ಉಪೇಂದ್ರ ಅವರ ಪ್ರಜಾಕೀಯದ ಹೆಸರಲ್ಲಿ ದುಡ್ಡು ಮಾಡಲು ಹೊರಟಿದ್ದಾನೆ.
ಈತನ ಫೋಟೋ ಪ್ರಕಟಿಸಿರುವ ಉಪೇಂದ್ರ, ತಾನು ರಾಜಕೀಯಕ್ಕಾಗಿ ಯಾರ ಬಳಿಯೂ ಹಣ ಕೇಳುವುದಿಲ್ಲ. ಹಣವೇ ಇಲ್ಲದೆ ರಾಜಕೀಯ ಮಾಡುವ ಕನಸಿನೊಂದಿಗೆ ಬಂದಿದ್ದೇನೆ. ಇಂತಹವರನ್ನು ಹತ್ತಿರ ಸೇರಿಸಬೇಡಿ ಎಂದಿದ್ದಾರೆ.